ಮಡಿಕೇರಿ: ವೈಜ್ಞಾನಿಕ ಕೃಷಿ, ಸಮರ್ಪಕ ಯಾಂತ್ರೀಕರಣ ಹಾಗೂ ಸಮಗ್ರ ಬೇಸಾಯ ಪದ್ಧತಿ ಅಳವಡಿಕೆ ರೈತರ ಆರ್ಥಿಕತೆ ಹೆಚ್ಚಿಸಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರ್ಪಡಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ‘ಕೃಷಿಯಂತ್ರ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರು, ಕೃಷಿಕರ ಶ್ರೇಯೋಭಿವೃದ್ದಿ ನಮ್ಮ ಸರ್ಕಾರದ ಆದ್ಯತೆ ಆಗಿದೆ. ರಾಜ್ಯ ಸರ್ಕಾರ ಕೃಷಿಕರ ಅನುಕೂಲಕ್ಕಾಗಿ 600 ಕ್ಕೂ ಹೆಚ್ಚು ಯಂತ್ರಧಾರೆ ಕೇಂದ್ರಗಳನ್ನು ತೆರದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಯಾಂತ್ರೀಕರಣ ಪ್ರೋತ್ಸಾಹ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೈಟೆಕ್ ಕಟಾವು ಹಬ್ ಸ್ಥಾಪನೆಗೆ 50 ಕೋಟಿ ಮೀಸಲಿರಿಸಲಾಗಿದ್ದು, 70:30 ರ ಸಹಾಯಧನ- ಬಂಡವಾಳ ಹೂಡಿಕೆ ಅನುಪಾತದಲ್ಲಿ ರೈತರೇ ಇದನ್ನು ಸ್ಥಾಪಿಸಿ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು, ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಆಹಾರ ಬೆಳೆಗಳನ್ನು ಉತ್ಪಾದಿಸುವಂತಾಗಬೇಕು ಎಂದು ಸಲಹೆ ನೀಡಿದ್ದಾರೆ.
ಪೊನ್ನಂಪೇಟೆ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ. ಕಾರ್ಯಪ್ಪ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಲೀಲಾವತಿ, ಪೊನ್ನಂಪೇಟೆ ಕೊಡವ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಕೆ.ಎ.ಚಿನ್ನಪ್ಪ, ಕೋಶಾಧಿಕಾರಿ ಕೆ.ಎನ್.ಉತ್ತಪ್ಪ, ಪ್ರಾಂಶುಪಾಲ ಡಾ.ಎಂ.ಬಸವರಾಜ್, ಬೆಳ್ಳಿ ಹಬ್ಬದ ಸಂಚಾಲಕರಾದ ಡಾ.ರೋಹಿಣಿ ತಿಮ್ಮಯ್ಯ, ಕೃಷಿ ಯಂತ್ರ ಮೇಳದ ಸಂಚಾಲಕ ಡಾ.ಬಿ.ಬಿ. ರಾಮಕೃಷ್ಣ, ಜಿ.ಪಂ.ಸಿಇಒ ವರ್ಣಿತ್ ನೇಗಿ ಇತರರು ಇದ್ದರು.
ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಡಾ. ವಿಜಯ್ ಅಂಗಡಿ, ಕೃಷಿಕರಾದ ಬಾರಿಯಂಡ ಸಂಜನ್ ಪೊನ್ನಪ್ಪ, ವಾಟೇರಿರ ಪೊನ್ನಪ್ಪ, ಕೆ.ಎಸ್.ಮಂಜುನಾಥ್, ಚಟ್ಟನೆರವನ ಪಿ.ಚಂದ್ರಶೇಖರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.