ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಶಾಲೆಗಳ ಬಾಗಿಲು ಮುಚ್ಚಿದೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಶಿಕ್ಷಣ ಮುಂದುವರೆದಿದೆ. ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ತರಗತಿಗಳು ಶುರುವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಶಾಲೆ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ ಒಂದರಿಂದ 9ರಿಂದ 12ನೇ ತರಗತಿ ಶಾಲೆಗಳು ಶುರುವಾಗಲಿವೆ.
ಸೆಪ್ಟೆಂಬರ್ 8 ರಿಂದ, 6 ರಿಂದ 8 ನೇ ತರಗತಿಯವರೆಗಿನ ಮಕ್ಕಳ ಶಾಲೆ ಶುರುವಾಗಲಿದೆ. ಕೊರೊನಾ ವೈರಸ್‌ನಿಂದಾಗಿ, ದೆಹಲಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಈ ವರ್ಷ ಏಪ್ರಿಲ್ ನಲ್ಲಿ ಶಾಲೆಯನ್ನು ತೆರೆಯಲು ಸರ್ಕಾರ ಪ್ರಯತ್ನಿಸಿತ್ತು. ಆದ್ರೆ ಅದೇ ಸಮಯದಲ್ಲಿ ಕೊರೊನಾ ಭೀಕರ ರೂಪ ಪಡೆದಿತ್ತು.
ದೆಹಲಿಯಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಬಹುತೇಕ ನಿಯಂತ್ರಣದಲ್ಲಿದೆ. ಹಂತ ಹಂತವಾಗಿ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ, 9 ರಿಂದ 12 ತರಗತಿವರೆಗಿನ ಶಾಲೆಗಳನ್ನು ಆರಂಭದಲ್ಲಿ ತೆರೆಯಲಾಗುತ್ತದೆ. ಈ ತರಗತಿಗಳ ಮಕ್ಕಳು ಸೆಪ್ಟೆಂಬರ್ 1 ರಿಂದ ಶಾಲೆಗೆ ಬರಲು ಪ್ರಾರಂಭಿಸುತ್ತಾರೆ. ಅದರ ನಂತರ, ಸೆಪ್ಟೆಂಬರ್ 8 ರಿಂದ, 6ನೇ ತರಗತಿಯಿಂದ 8 ನೇ ತರಗತಿಯವರೆಗಿನ ಮಕ್ಕಳಿಗಾಗಿ ಶಾಲೆಗಳು ತೆರೆಯಲ್ಪಡುತ್ತವೆ. ಶಾಲೆಯಲ್ಲಿ ನಡೆಯುವ ಅಧ್ಯಯನಗಳನ್ನು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಶಾಲೆಯನ್ನು ತೆರೆಯುವುದು ಅನಿವಾರ್ಯವೆಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಶಾಲೆಗಳಿಗೆ ಮಕ್ಕಳನ್ನು ಕಳಿಸುವಂತೆ ಸರ್ಕಾರ ಯಾವುದೇ ಒತ್ತಡ ಹೇರುವುದಿಲ್ಲ. ಶಾಲೆಯಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕಾಗುತ್ತದೆ. ಮಾಸ್ಕ್ ಕಡ್ಡಾಯವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜೊತೆಗೆ ಶಿಕ್ಷಕರಿಗೆ ಕೊರೊನಾ ಲಸಿಕೆ ಆಗಿರಬೇಕೆಂದು ದೆಹಲಿ ಸರ್ಕಾರ ಹೇಳಿದೆ.