ಕೊರೊನಾ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕಳೆದ ಎರಡು ವರ್ಷಗಳಿಂದ ಶಾಲೆಗಳು ತೆರೆದಿಲ್ಲ. ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಹೇಳಲಾಗ್ತಿದೆ. ಈ ಮಧ್ಯೆ ಉತ್ತದ ಪ್ರದೇಶದ ಯೋಗಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಯೋಗಿ ಸರ್ಕಾರ, ಮಾಧ್ಯಮಿಕ, ಉನ್ನತ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಿದೆ. ಸೋಮವಾರ ಸಭೆ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆಗಸ್ಟ್ 16 ರಿಂದ ಎಲ್ಲಾ ಶಾಲೆಗಳನ್ನು ತೆರೆಯಲು ನಿರ್ಧರಿಸಿರುವ ಘೋಷಣೆ ಮಾಡಿದ್ದಾರೆ. ಶೇಕಡಾ 50ರಷ್ಟು ಹಾಜರಾತಿಯಲ್ಲಿ ಶಾಲೆ ನಡೆಯಲಿದೆ.
ಕೊರೊನಾ ಸೋಂಕಿನ ನಿಯಂತ್ರಿತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಶಾಲೆ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಯೋಗಿ ಹೇಳಿದ್ದಾರೆ. ಪದವಿ ಹಂತದಲ್ಲಿ ಪ್ರವೇಶ ಪ್ರಕ್ರಿಯೆಯನ್ನು ಆಗಸ್ಟ್ 5 ರಿಂದ ಆರಂಭಿಸಬೇಕು. ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳಲ್ಲೂ, ಮುಂದಿನ ತರಗತಿಗೆ ಬಡ್ತಿ ಪಡೆದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆಗಸ್ಟ್ 16 ರಿಂದ ಅರ್ಧ ಸಾಮರ್ಥ್ಯದೊಂದಿಗೆ ಶಾಲೆ ಆರಂಭವಾಗಬೇಕೆಂದು ಅವರು ಹೇಳಿದ್ದಾರೆ.
ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರದ ಜೊತೆ ಶೌಚಾಲಯ, ಶಾಲೆ ಕೊಠಡಿ ಸ್ವಚ್ಛತೆಗೆ ಗಮನ ನೀಡಬೇಕೆಂದು ಅವರು ಹೇಳಿದ್ದಾರೆ. ಯುಪಿಯ 10 ಜಿಲ್ಲೆ ಸಂಪೂರ್ಣ ಕೊರೊನಾ ಮುಕ್ತವಾಗಿದೆ. ಕಳೆದ 24 ಗಂಟೆಗಳಲ್ಲಿ ಯುಪಿಯ 52 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ.