ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಮೇ 31 ರಂದು ಏಕಕಾಲದಲ್ಲಿ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. ಎರಡು ತಿಂಗಳ ರಜೆ ಬಳಿಕ ಶಾಲೆಗೆ ಮರಳಲಿರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಸಜ್ಜಾಗಿದ್ದಾರೆ.
ಹಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು ಆರಂಭಿಸಿದ್ದು ಸರ್ಕಾರಿ ಶಾಲೆಗಳು ಇಂದಿನಿಂದ ಆರಂಭಿಸಲು ಸೂಚನೆ ನೀಡಲಾಗಿದೆ. ಹೀಗಾಗಿ ಎರಡು ದಿನ ಮುಂಚಿನಿಂದಲೇ ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿತ್ತು.
ಅಲ್ಲದೆ ಮೇ 31 ರಂದು ನಡೆಯುವ ಪ್ರಾರಂಭೋತ್ಸವದ ದಿನ ತಳಿರು ತೋರಣಗಳಿಂದ ಸಿಂಗರಿಸಲು ಹಾಗೂ ಅಂದು ಆಗಮಿಸುವ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲು ಕೆಲವೆಡೆ ಸಿದ್ಧತೆ ನಡೆಸಲಾಗಿದೆ. ಜೊತೆಗೆ ಬಿಸಿಯೂಟ ಪೂರೈಸಲು ಅಡುಗೆ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ.
ಕೆಲವೊಂದು ಶಾಲೆಗಳಲ್ಲಿ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಭಾವಚಿತ್ರದ ಫ್ಲೆಕ್ಸ್ ಹಾಕಿ ಶಾಲೆ ಆರಂಭದ ದಿನ ಅವರನ್ನು ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಕರೆತಂದು ಆತ್ಮೀಯವಾಗಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.