ಹೈದರಾಬಾದ್: ತೆಲಂಗಾಣದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಸೂಚನೆ ನೀಡಲಾಗಿದೆ. ಜನವರಿ 8 ರಿಂದ 16 ರವರೆಗೆ ರಜೆ ಘೋಷಣೆ ಮಾಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನಿರ್ದೇಶನ ನೀಡಿದ್ದಾರೆ.
ಕೊರೊನಾ ಸೋಂಕು ಮತ್ತು ರೂಪಾಂತರ ಒಮಿಕ್ರಾನ್ ತೀವ್ರ ಏರಿಕೆ ಕಂಡ ಹಿನ್ನೆಲೆಯಲ್ಲಿ ಸಿಎಂ ಚಂದ್ರಶೇಖರರಾವ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಹಲವು ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ. ಶಾಲೆ, ಕಾಲೇಜ್ ಗಳಿಗೆ ರಜೆ ನೀಡಲಾಗಿದೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅವಲೋಕನಕ್ಕಾಗಿ ಸೋಮವಾರ ತಡರಾತ್ರಿ ಪ್ರಗತಿ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಅಗತ್ಯವಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿದೆ. ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಹೇರುವ ಅಗತ್ಯವಿಲ್ಲ ಎಂದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ಬೆಡ್‌ಗಳು, ಆಕ್ಸಿಜನ್ ಬೆಡ್‌ಗಳು, ಔಷಧಗಳು ಮತ್ತು ಪರೀಕ್ಷಾ ಕಿಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.