ಹಜಾರಿಬಾಗ್: ಕಳೆದ ವಾರ ನಾಪತ್ತೆಯಾಗಿದ್ದ 11 ನೇ ತರಗತಿ ವಿದ್ಯಾರ್ಥಿ ಶುಕ್ರವಾರ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸಿದ್ಧ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಬಾಲಕನನ್ನು ಜಗಳದ ಹಿನ್ನೆಲೆಯಲ್ಲಿ ಸಹಪಾಠಿಗಳು ಕೊಂದು ಶವವನ್ನು ಇಚಕ್ ಪ್ರದೇಶದ ಬಾವಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಜಗಳ ಬಿಡಿಸಲು ಜನವರಿ 6 ರಂದು ತನ್ನ ಸಹಪಾಠಿಗಳೊಂದಿಗೆ ಹೊರಗೆ ಹೋಗಿದ್ದ ಆತ ಮನೆಗೆ ವಾಪಸ್ಸಾಗಿರಲಿಲ್ಲ ಎಂದು ಕೊರ್ರಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ನಿಶಿ ಕುಮಾರಿ ತಿಳಿಸಿದ್ದಾರೆ. ಆತನ ಪೋಷಕರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಲಾಗಿದೆ.
ಆರು ದಿನಗಳ ನಂತರ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಆತನ ಪೋಷಕರು ಗುರುತಿಸಿದ್ದಾರೆ. ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಬಹುದು. ತನಿಖೆಯ ದಾರಿ ತಪ್ಪಿಸುವ ಸಲುವಾಗಿ ಶವವನ್ನು ಬಾವಿಗೆ ಎಸೆಯಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಆತನ ಇಬ್ಬರು ಸಹಪಾಠಿಗಳನ್ನು ಬಂಧಿಸಲಾಗಿದೆ. ಇತರ ವಿದ್ಯಾರ್ಥಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.