ಸಾಮಾಜಿಕ ಜಾಲತಾಣದಲ್ಲಿ ಶಾಲಾ ಬಾಲಕನೊಬ್ಬ ’ಆತ್ಮಹತ್ಯೆ’ ಸಂದೇಶ ಹಾಕಿದ್ದನ್ನು ಕಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಅದರ ಸತ್ಯಾಸತ್ಯತೆ ಕಂಡಾಗ, ಅದೊಂದು ಹುಸಿ ಸಂದೇಶ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ನೋಯಿಡಾದ ಗೌತಮ ಬುದ್ಧನಗರದಲ್ಲಿ ಈ ಘಟನೆ ಜರುಗಿದೆ. ಪೊಲೀಸ್ ಆಯುಕ್ತರ ಸಾಮಾಜಿಕ ಜಾಲತಾಣದ ಸೆಲ್‌ನಲ್ಲಿ, 10ನೇ ತರಗತಿ ಬಾಲಕ ಪೋಸ್ಟ್ ಮಾಡಿದ ಈ ’ಆತ್ಮಹತ್ಯೆಯ ವಿಡಿಯೋ’ ನೋಡಿದ ಪೊಲೀಸರು, ಇಸ್‌ಸ್ಟಾಗ್ರಾಂ ಹಾಗೂ ಮೆಟಾದ ನೆರವಿನೊಂದಿಗೆ ಬಾಲಕನ ಜಾಗ ಪತ್ತೆ ಮಾಡಿದ್ದಾರೆ.
ಏಪ್ರಿಲ್ 26ರ ಮಧ್ಯಾಹ್ನ 1:30ರ ವೇಳೆಗೆ ಈ ಘಟನೆ ಜರುಗಿದೆ ಎಂದು ಕೇಂದ್ರ ನೋಯಿಡಾದ ಹೆಚ್ಚುವರಿ ಪೊಲೀಸ್ ಉಪ ಕಮಿಷನರ್ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ.
“ಈ ಪೋಸ್ಟ್‌ನ ಇನ್‌ಪುಟ್‌ಗಳು ಸಿಗುತ್ತಲೇ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಕೂಡಲೇ, ಮೆಟಾ ಪ್ರಧಾನ ಕಚೇರಿಯ ನೆರವು ಪಡೆದು, ಬಾಲಕನ ಲೊಕೇಶನ್‌ಗೆ ಕಳುಹಿಸಲಾಗಿದೆ. ಆಲೌಟ್ ದ್ರವವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡು ಬಾಲಕ ವಿಡಿಯೋ ಮಾಡಿದ್ದ. ಆದರೆ ಆತ ಅಸಲಿಗೆ ವೇಪರೈಜ಼ರ್‌ನ ಖಾಲಿ ಡಬ್ಬದಲ್ಲಿ ನೀರು ಕುಡಿದಿದ್ದ,” ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗಳು ಹಾಗೂ ಲೈಕ್ಸ್‌ಗಳನ್ನು ಪಡೆಯಲು ಹೀಗೆ ಮಾಡಿದ್ದಾಗಿ ಬಾಲಕ ಹೇಳಿದ್ದಾನೆ. ನಿಯಮಗಳ ಅನುಸಾರ, ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಆತನಿಗೆ ಕೌನ್ಸೆಲಿಂಗ್ ಮಾಡಿ ಹೆತ್ತವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ಅನೇಕ ರಾಜ್ಯಗಳ ಪೊಲೀಸ್ ಇಲಾಖೆಗಳೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿರುವ ಮೆಟಾ, ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಮಾಡಿದರೆ, ಅಂಥ ಪೋಸ್ಟ್‌ನ ವಿವರನ್ನು ರಿಯಲ್‌ಟೈಮ್‌ನಲ್ಲಿ ಆಯಾ ರಾಜ್ಯಗಳ ಪೊಲೀಸ್ ಪ್ರಧಾನ ಕಚೇರಿಗಳಿಗೆ ಕಳುಹಿಸುತ್ತದೆ.