
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ವಿಚಾರಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ.
ಶಾಲೆಗಳಿಂದ ಹೊರಗುಳಿದ ಮಕ್ಕಳ ಬಗ್ಗೆಯೂ ಅಮೈಕಸ್ ಕ್ಯೂರಿ ಕೆ.ಎನ್. ಫಣೀಂದ್ರ ವರದಿ ನೀಡಿದ್ದು, 2901 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. 4122 ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. 464 ಶಾಲೆಗಳಲ್ಲಿ ಶೌಚಾಲಯ ಇಲ್ಲ. 87 ಶಾಲೆಗಳಲ್ಲಿ ಕುಡಿಯುವ ನೀರು ಇಲ್ಲ ಎಂದು ತಿಳಿಸಿದ್ದಾರೆ.
ಶಾಲೆಗಳ ದುಸ್ಥಿತಿಗೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2013 ರಿಂದ ವಿಚಾರಣೆ ನಡೆಸುತ್ತಿದ್ದರೂ ವ್ಯವಸ್ಥೆ ಸುಧಾರಿಸಿಲ್ಲ. ಶೌಚಾಲಯ ಕುಡಿಯುವ ನೀರಿಲ್ಲದ ಸರ್ಕಾರಿ ಶಾಲೆಗಳಿವೆ. ನಮ್ಮ ಮಕ್ಕಳಿಗೆ ನಾವು ಮಿನರಲ್ ವಾಟರ್ ನೀಡಬಹುದು. ಆದರೆ, ಹಲವು ಶಾಲೆಗಳ ಮಕ್ಕಳಿಗೆ ಕುಡಿಯುವ ನೀರೇ ಇಲ್ಲ. ಇದು ನಾಚಿಕೆಯಾಗುವ ವಿಚಾರವಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಜೂನ್ 15 ಕ್ಕೆ ಮುಂದೂಡಿದೆ.