ಬೆಂಗಳೂರು: ಜನವರಿ 1 ರಿಂದ ಶಾಲೆ ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲೆ ಆರಂಭಕ್ಕೆ ಮೂರು ದಿನ ಮೊದಲು ಸಿಬ್ಬಂದಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಕಡ್ಡಾಯವಾಗಿರುತ್ತದೆ. 10 ನೇ ತರಗತಿಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ವಾರದಲ್ಲಿ 6 ದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 30 ರವರೆಗೆ ತಲಾ 45 ನಿಮಿಷಗಳ ಮೂರು ಪಿರಿಯಡ್ ಗಳಲ್ಲಿ ಬೋಧನೆ ಮಾಡಲಾಗುತ್ತದೆ. ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ ಪಾಠ ಮಾಡಲಾಗುವುದು.
ವಿದ್ಯಾಗಮ ಯೋಜನೆಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ರೌಢಶಾಲೆಗಳಲ್ಲಿ 8, 9ನೇ ತರಗತಿಗಳಿಗೆ ವಾರದ ಐದು ದಿನ ಮಧ್ಯಾಹ್ನ 2 ಗಂಟೆಯಿಂದ 4.30 ರವರೆಗೆ ಮೂರು ತರಗತಿಗಳು ನಡೆಯಲಿವೆ. ಪ್ರಾಥಮಿಕ ಶಾಲೆಯಲ್ಲಿ 6 ರಿಂದ 8ನೇ ತರಗತಿ ಮಕ್ಕಳಿಗೆ ವಾರಕ್ಕೆ 6 ದಿನ ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ 3 ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳು ಹೆಚ್ಚಾದಲ್ಲಿ 15 -20 ಮಕ್ಕಳ ತಂಡ ರಚಿಸಿ ವಿದ್ಯಾಗಮ ನಡೆಸಲು ಸೂಚನೆ ನೀಡಲಾಗಿದೆ.
ಜನವರಿ 1 ರಿಂದ ಎಸ್ಎಸ್ಎಲ್ಸಿ ಮತ್ತು ಪಿಯು ಕಾಲೇಜುಗಳು ಹಾಗೂ ವಿದ್ಯಾಗಮ ತರಗತಿಗಳು ಆರಂಭವಾಗಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ. ಅಗತ್ಯವಿದ್ದರೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಲಾಗಿದೆ.