
ಭಾರತದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹಲವಾರು ಪ್ರದೇಶಗಳು, ರಸ್ತೆಗಳು ಭಾರಿ ಮಳೆಯಿಂದ ಜಲಾವೃತವಾಗಿದೆ. ನೀರು ತುಂಬಿರುವ ರಸ್ತೆಯಲ್ಲೇ ಜನರು ಮಜಾ ಮಾಡಿರುವ ವಿಡಿಯೋಗಳನ್ನು ನೀವು ನೋಡಿರಬಹುದು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಬಾಲಕರ ಗುಂಪೊಂದು ಒಟ್ಟಿಗೆ ಈಜುತ್ತಿರುವ ದೃಶ್ಯಾವಳಿಯಾಗಿದೆ.
ಹೌದು, ನದಿಯಂತೆ ಕಾಣುವ ಪ್ರದೇಶದಲ್ಲಿ ಬಾಲಕರು ಈಜು ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ಸಿಯೋನಿಯಲ್ಲಿ ಭಾರಿ ಮಳೆಯಿಂದಾಗಿ, ನಗರದ ಶಾಲೆಯೊಂದರ ಆವರಣ ನೀರಿನಿಂದ ತುಂಬಿತ್ತು. ಧಾರಾಕಾರ ಮಳೆಯಿಂದ ಕೊಳದಂತಾಗಿದ್ದ ಆವರಣದಲ್ಲಿ ವಿದ್ಯಾರ್ಥಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ.
ಜುಲೈ 17ರ ಭಾನುವಾರದಂದು ಭಾರಿ ಮಳೆಯ ನಂತರ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಆಟವಾಡುತ್ತಾ, ಅದೇ ನೀರಿನ ಝಳಕ ಮಾಡುತ್ತ ಬಾಲಕರು ಈಜು ಹೊಡೆದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕರು ಒಟ್ಟಿಗೆ ಈಜುವುದನ್ನು ಹಾಗೂ ಮೋಜು ಮಸ್ತಿ ಮಾಡುವುದನ್ನು ನೋಡಬಹುದು.
ಅಂದಹಾಗೆ, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ನೀಡಿದೆ.