ಬೆಂಗಳೂರು: ಅನುದಾನಿತ ಖಾಸಗಿ ಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.
2023 -24ನೇ ಶೈಕ್ಷಣಿಕ ಸಾಲಿಗೆ ಅನುದಾನಿತ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ವರ್ಗಾವಣೆ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಡಳಿತ ಮಂಡಳಿಗಳು ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನಾಂಕವಾಗಿದೆ.
ಆಡಳಿತ ಮಂಡಳಿಗಳು ಸಲ್ಲಿಸಿದ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ ಉಪನಿರ್ದೇಶಕರಿಗೆ ಮೇ 9ರ ವರೆಗೆ ಸಲ್ಲಿಸಲು ಕಾಲಾವಕಾಶ ಕಲ್ಪಿಸಲಾಗಿದೆ. ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರ ಅವಶ್ಯಕತೆ ಖಚಿತಪಡಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಡಿಡಿಪಿಐ ಪ್ರಸ್ತಾವನೆ ಪರಿಶೀಲಿಸಿ ದಾಖಲೆ ಸೂಕ್ತ ಶಿಫಾರಸಿನೊಂದಿಗೆ ನಿರ್ದೇಶಕರಿಗೆ ಮೇ 20 ರೊಳಗೆ ಸಲ್ಲಿಸಬೇಕು. ಅಂತರ ವಿಭಾಗ ವರ್ಗಾವಣೆ ಕೋರಿ ಬಂದ ಪ್ರಸ್ತಾವನೆಗಳನ್ನು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಏಪ್ರಿಲ್ 20ರಿಂದ ಮೇ 5 ರವರೆಗೆ ಸಲ್ಲಿಸಲು ಸಮಯ ನೀಡಲಾಗಿದೆ.