ಧಾರವಾಡ: ಮಧ್ಯಾಹ್ನದ ಊಟ ತಂದುಕೊಡದ ಮಕ್ಕಳನ್ನು ಕೊಠಡಿಯಲ್ಲಿ ಕೂಡಿಹಾಕಿ ಶಿಕ್ಷಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿ ಶಾಲೆ ಎದುರು ಪೋಷಕರು ಹಾಗೂ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜುಂಜನಬೈಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸುಜಾತ ಸುಣಗಾರ ಅವರು ಮಕ್ಕಳನ್ನು ಥಳಿಸಿದ್ದಾರೆ ಎಂದು ಶಾಲೆ ಎದುರು ಪ್ರತಿಭಟನೆ ನಡೆಸಲಾಗಿದೆ.
4 ಮತ್ತು 5ನೇ ತರಗತಿ ಮಕ್ಕಳನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಶಿಕ್ಷಕಿ ಕೋಲಿನಿಂದ ಮನಬಂದಂತೆ ಥಳಿಸಿದ್ದು, ನೋವುತಾಳದ ಮಕ್ಕಳು ಕೊಠಡಿಯಿಂದ ಓಡಿ ಬಂದಿದ್ದಾರೆ. ಕೆಲವರು ಬಿದ್ದು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ, ಶಿಕ್ಷಣ ಸಂಯೋಜಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಕ್ಷಕಿ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.