ಬೆಂಗಳೂರು: ಶಾಲಾ ಮಕ್ಕಳಿಗೆ ಆರು ದಿನವೂ ಮೊಟ್ಟೆ ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಶೀಘ್ರವೇ ಯೋಜನೆಗೆ ಚಾಲನೆ ಸಿಗಲಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುವುದು.
ಇದೀಗ ಮಠಗಳು ನಡೆಸುವ ಶಾಲೆಗಳಿಗೆ ಮೊಟ್ಟೆ ವಿತರಣೆ ಬೇಡವೆಂದು ಸ್ವಾಮೀಜಿಗಳು ಒತ್ತಾಯಿಸಿದ್ದಾರೆ. ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚೆನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿಯವರು ವೀರಶೈವ ಲಿಂಗಾಯಿತ ಸೇರಿದಂತೆ ವಿವಿಧ ಧರ್ಮಪೀಠಗಳು, ಮಠಗಳು ನಡೆಸುವ ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಬಹುತೇಕ ಮಠ ಮಂದಿರಗಳ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳು ಮಠ, ಪೀಠಗಳ ಆವರಣದಲ್ಲಿಯೇ ನಡೆಯುತ್ತಿವೆ. ಅಲ್ಲಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವುದು ಧಾರ್ಮಿಕ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.
ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿ ಶಾಲಾ ಶಿಕ್ಷಣ ಇಲಾಖೆ ಆದೇಶಗಳನ್ನು ಹೊರಡಿಸಬೇಕು. ಮೊಟ್ಟೆ ನಿರಾಕರಿಸುವ ಮಕ್ಕಳಿಗೆ ವಿತರಿಸುವಂತೆ ಮಠ ಮಂದಿರಗಳು ನಡೆಸುವ ಶಾಲಾ ಮಕ್ಕಳಿಗೆ ನಿತ್ಯವೂ ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸಲು ಪರಿಸ್ಕೃತ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.