ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಬೇಸಿಗೆ ರಜೆ ವಿಸ್ತರಿಸಬೇಕೆಂದು ವಿಧಾನಪರಿಷತ್ ಕೆಲವು ಸದಸ್ಯರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಆದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಏನೇ ಆದರೂ ಮೇ 16ರಿಂದ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದಿದ್ದಾರೆ.
ಕೊರೋನಾ ಕಾರಣದಿಂದ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದುಳಿದಿರುವುದನ್ನು ಗಮನದಲ್ಲಿಟ್ಟುಕೊಂಡು ಕಲಿಕಾ ಚೇತರಿಕೆ ಕೈಗೊಳ್ಳಲು ಮೇ 16 ರಿಂದಲೇ ಶಾಲೆಗಳನ್ನು ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಮೇ 16 ರಿಂದ ಶಾಲೆ ಆರಂಭಿಸಬೇಕು ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ರಜೆ ವಿಸ್ತರಿಸಬಾರದು. ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಬೇಕೆಂದು ಮನವಿ ಮಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಶಿಕ್ಷಕರನ್ನು ಓಲೈಸಿಕೊಳ್ಳಲು ಮತ್ತು ಪ್ರಚಾರಕ್ಕೆ ಬಳಸಿಕೊಳ್ಳಲು ಕೆಲವು ವಿಧಾನ ಪರಿಷತ್ ಸದಸ್ಯರು ಬೇಸಿಗೆ ರಜೆಯನ್ನು ಮುಂದೂಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.