ದಸರಾ ರಜೆ ಬಳಿಕ ಇಂದಿನಿಂದ ಶಾಲೆಗಳು ಪುನರಾರಂಭಗೊಂಡಿದೆ. ಮೊದಲ ದಿನವಾದ ಇಂದು ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದು, ಇದರ ಮಧ್ಯೆ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹಾಕಿರುವ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ.
ಕೊಕ್ಕರ್ಣೆಯ ಕೆಪಿಎಸ್ ಹೈಸ್ಕೂಲ್ ಶಿಕ್ಷಕ ವರದರಾಜ್ ಬಿರ್ತಿ ಎಂಬವರು ಈ ಪೋಸ್ಟ್ ಹಾಕಿದ್ದು, ಇದನ್ನು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಕೂಡ ಹಂಚಿಕೊಂಡಿದ್ದಾರೆ. ಶಿಕ್ಷಕರ ಪೋಸ್ಟ್ ಈ ಕೆಳಗಿನಂತಿದೆ.
“ಬನ್ನಿ ಮಕ್ಕಳೇ,ಭರವಸೆಯ ಮಿಂಚಿನೊಂದಿಗೆ….”
ರಜೆ ಮುಗಿಯಿತು ಮಕ್ಕಳೇ
ಶುರುವಾಯ್ತು ಶಾಲೆ
ಯುನಿಫಾರ್ಮ್ ತೆಗೆದಿಟ್ಟುಕೊಳ್ಳಿ
ಬಂತು ಹೊರಡುವ ವೇಳೆ
ಇಂದು ಜಂಬೂ ಸವಾರಿ
ದಸರಾ ಮೆರವಣಿಗೆಯಲ್ಲಿ
ನಾಳೆ ಎಂದಿನಂತೆ ಹಾಜರಿ
ಪಾಠ,ತರಗತಿಯಲ್ಲಿ
ಹುಡುಗರೇ,ಇಲ್ಲಿ ಕೇಳಿ
ಆ ತಲೆಗೂದಲನ್ನು ಮೊದಲು
ಸರಿಯಾಗಿ ಕತ್ತರಿಸಿಕೊಳ್ಳಿ
ಮೂಡಿದ ಕಾಪಿ ಗೆರೆ,ವೆಜ್ ಕಟ್
ಹೆಬ್ಬುಲಿ ಕಟ್ ಗಳನ್ನೆಲ್ಲಾ ಅಳಿಸಿಕೊಳ್ಳಿ
ಮೇಷ್ಟ್ರು ,ಟೀಚರ್ ಗಳೆಲ್ಲಾ
ಹಸಿದ ಹೆಬ್ಬುಲಿಗಳಂತೆ
ಕಾಯುತ್ತಿದ್ದಾರೆ
ನೆನಪಿಟ್ಟುಕೊಳ್ಳಿ..!
ಟೈಟಾಗಿ ಅಂಟಿಕೊಂಡ ಪ್ಯಾಂಟನ್ನು
ಲೈಟಾಗಿಯಾದರೂ
ಸರಿಪಡಿಸಿಕೊಳ್ಳಿ
ಎಚ್.ಎಮ್ಮು,ಪಿ.ಟಿ.ಸರ್ ನವರ ಕಣ್ಣು
ಕೆಂಪಾಗಿ ಬ್ರೈಟ್ ಆಗಬಹುದು
ಜೋಕೆ…!
ಹುಡುಗಿಯರೇ,ನೀವೂ ಅಷ್ಟೇ
ಎಷ್ಟು ಜಡೆ ಹಾಕಬೇಕೆಂದು
ಮತ್ತೆ ಮತ್ತೆ ಕರೆ ಮಾಡಿ ಕಿರಿಕಿರಿ ಮಾಡಬೇಡಿ
ರೂಲ್ಸನ್ನು ಪಾಲಿಸಿ
ಹೊರಗಿನ ಬೋರ್ಡಲ್ಲಿ
ದಿನದಮಾತು ಬರೆಯುವವರು
ನಾಳೆ ದಿನವೂ ಬೇಗ ಬಂದು ಬರೆಯಿರಿ
ಪ್ರೇಯರ್ ನ ಕೋಗಿಲೆಗಳೇ
ಹಳೆಯ ಲಯವನ್ನು ಕಂಡುಕೊಳ್ಳಲು
ಮನೆಯಲ್ಲೇ ಟ್ರಯಲ್ ಮಾಡಿಕೊಳ್ಳಿ
ನಾಡ ಹಬ್ಬ ಮುಗಿಯಿತು
ನಾಡ ಗೀತೆ ಮೊಳಗಲಿ..
ಕೊಟ್ಟ ಹೋಮ್ ವರ್ಕ್
ನೆಟ್ಟಗೆ ಮುಗಿಸಿದಿರಾ ಗಮನಿಸಿ
ಗುರುಗಳೆಲ್ಲಾ ಒಮ್ಮೆಲೇ
ಮುಗಿಬೀಳಬಹುದು
ಜಾಗ್ರತೆ…!
ಅರ್ಧ ವರ್ಷ ಮುಗಿಯಿತು
ಸ್ಕೂಲ್ ಡೇ, ಟ್ಯಾಲೆಂಟ್ಸ್ ಡೇ
ಪ್ರವಾಸ ,ತಿರುಗಾಟ ಅಂತ
ಇನ್ನೇನು ಮುಗಿದೇ ಹೋಗಲಿದೆ
ಈ ವರ್ಷ..
ಬನ್ನಿ ಮಕ್ಕಳೇ ಶಾಲೆಗೆ
ಹಳೆಯ ಸವಿ ನೆನಪಿನೊಂದಿಗೆ
ಮಳೆಯ ಕಾಣದ ನೆಲದಲ್ಲೂ
ಭರವಸೆಯ ಮಿಂಚಿನೊಂದಿಗೆ..
“ವರದರಾಜ್ ಬಿರ್ತಿ”
ಕೆ.ಪಿ.ಎಸ್.ಹೈಸ್ಕೂಲ್ ಕೊಕ್ಕರ್ಣೆ