ಕೊರೊನಾ ಪ್ರಕರಣಗಳ ಮಧ್ಯೆ ಅನೇಕ ರಾಜ್ಯಗಳಲ್ಲಿ ಶಾಲೆಗಳು ಮತ್ತೆ ಆರಂಭಗೊಂಡಿವೆ. ರಾಜ್ಯದಲ್ಲಿ ನಾಳೆಯಿಂದ 8ನೇ ತರಗತಿ ಶುರುವಾಗ್ತಿದೆ. 9 ರಿಂದ 12 ರವರೆಗಿನ ಶಾಲೆಗಳು ಈಗಾಗಲೇ ಶುರುವಾಗಿದೆ. ಪೋಷಕರು ಶಾಲೆ ಆರಂಭವಾಗಿರುವ ಬಗ್ಗೆ ಸಂತೋಷಗೊಂಡಿದ್ದಾರೆ. ಆದ್ರೆ ಅವರಿಗೆ ಅನೇಕ ಸವಾಲುಗಳಿವೆ.
ಶಾಲೆಯನ್ನು ಪುನಃ ತೆರೆಯುವುದರಿಂದ ಪೋಷಕರು, ಮಕ್ಕಳು, ಶಿಕ್ಷಕರು ಎಲ್ಲರೂ ಮತ್ತೆ ಅಭ್ಯಾಸ ಬದಲಿಸಿಕೊಳ್ಳಬೇಕಿದೆ. ಮಕ್ಕಳು ಇನ್ನು ಮುಂದೆ ಶಾಲಾ ಬ್ಯಾಗ್ಗಳ ಹೊರೆಯನ್ನು ಹೊರಬೇಕಿದೆ. ಸಾಮಾಜಿಕ ಅಂತರವನ್ನು ಪಾಲಿಸಬೇಕಿದೆ. ಮಾಸ್ಕ್ ಹಾಕಬೇಕಿದೆ. ಇದರ ಜವಾಬ್ದಾರಿ ಶಿಕ್ಷಕರ ಮೇಲಿದೆ.
ಕಳೆದ ಒಂದೂವರೆ ವರ್ಷದಿಂದ ಶಾಲೆ ಮುಚ್ಚಿತ್ತು. ಮಕ್ಕಳ ಹಾಗೂ ಪೋಷಕರ ದಿನಚರಿ ಸಂಪೂರ್ಣ ಬದಲಾಗಿತ್ತು. ರಾತ್ರಿ ತಡವಾಗಿ ಮಲಗುತ್ತಿದ್ದ ಪೋಷಕರು ಮತ್ತು ಮಕ್ಕಳು ಬೆಳಿಗ್ಗೆ ತಡವಾಗಿ ಏಳ್ತಿದ್ದರು. ಆದ್ರೆ ಇದನ್ನು ಇನ್ನು ಮುಂದೆ ಬದಲಿಸಿಕೊಳ್ಳಬೇಕಿದೆ. ಇದಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ.
ಮುಂಜಾನೆ ಮಕ್ಕಳನ್ನು ಬೇಗ ಎಬ್ಬಿಸುವುದು.ಉಪಹಾರ, ಸ್ನಾನ, ಊಟದ ಬಾಕ್ಸ್, ಶಾಲೆಗೆ ಮಕ್ಕಳನ್ನು ಬಿಡುವುದು ಹೀಗೆ ಅನೇಕ ಕೆಲಸದ ಹೊರೆ ಬೀಳಲಿದೆ.
ಶಿಕ್ಷಕರ ಜವಾಬ್ದಾರಿ ಕೂಡ ಹೆಚ್ಚಾಗಲಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಕ್ಕಳಿಗೆ ಕಲಿಸಬೇಕು. ಯಾವುದೇ ಅಸ್ವಸ್ಥತೆ ಇದ್ದರೂ ತಕ್ಷಣ ತಿಳಿಸುವಂತೆ ಮಕ್ಕಳಿಗೆ ಶಿಕ್ಷಕರು ಹೇಳಬೇಕು.