ಬೆಂಗಳೂರು: ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟ, ವಾರದಲ್ಲಿ ಎರಡು ದಿನ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಜೊತೆಗೆ ಒಂದು ಲೋಟ ರಾಗಿ ಮಾಲ್ಟ್ ನೀಡಲು ನಿರ್ಧರಿಸಲಾಗಿದೆ.
ಅಪೌಷ್ಟಿಕತೆ ತಡೆಯಲು ಶಾಲೆಗಳಲ್ಲಿ ಮಾಲ್ಟ್ ಸಿದ್ದಪಡಿಸಿ ವಿತರಿಸಲಾಗುವುದು. ಡಿಸೆಂಬರ್ ನಿಂದ ಶಾಲೆಗಳಲ್ಲಿ ಮಕ್ಕಳಿಗೆ ರಾಗಿ ಮಾಲ್ಟ್ ನೀಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದಲ್ಲಿ ಎರಡು ದಿನ ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಡಿಸೆಂಬರ್ ನೊಂದಿಗೆ ಇವುಗಳ ಜೊತೆಗೆ ರಾಗಿ ಮಾಲ್ಟ್ ಕೂಡ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ರಾಗಿ ಗಂಜಿ ನೀಡಿದ್ದು ಯಶಸ್ವಿಯಾಗಿದೆ. ಈ ಶೈಕ್ಷಣಿಕ ವರ್ಷಾಂತ್ಯದವರೆಗೆ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಒಂದು ಲೋಟ ರಾಗಿ ಮಾಲ್ಟ್ ನೀಡಲಾಗುವುದು. ಇದಕ್ಕೆ ಅಗತ್ಯವಾದ ರಾಗಿ ಹಿಟ್ಟನ್ನು ಶಾಲೆಗಳಿಗೆ ಪೂರೈಸಲಾಗುವುದು. ಡಿಸೆಂಬರ್ ನಲ್ಲಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.