
ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಿಧನ, ನಿವೃತ್ತಿ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ದಿನಾಂಕ 1-1-2016 ರಿಂದ 31.12 2020 ರ ವರೆಗೆ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಇರುವ ಬೋಧಕ ಹುದ್ದೆಗಳನ್ನು ತುಂಬಲು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದೆ.
1994-95 ರ ಶೈಕ್ಷಣಿಕ ಅವಧಿಗೆ ಪೂರ್ವದಲ್ಲಿ ಪ್ರಾರಂಭಗೊಂಡು ಈಗಾಗಲೇ ವೇತನಾನುದಾನಕ್ಕೆ ಒಳಪಟ್ಟ ಖಾಸಗಿ ಅನುದಾನಿತ ಪ್ರೌಢಶಾಲೆಗಳು, ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಹಾಗೂ ಮತ್ತಿತರ ಕಾರಣಗಳಿಂದ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಈ ಷರತ್ತಿಗಳಿಗೊಳಪಟ್ಟು ಭರ್ತಿ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.
ಷರತ್ತುಗಳು:
ಹುದ್ದೆಗಳನ್ನು ಭರ್ತಿ ಮಾಡಿಕೊಂಡ ನಂತರ ನೇಮಕಾತಿ ಅನುಮೋದನೆಗಾಗಿ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ : ಆಇ 384 ವೆಚ್ಚ-8/2013, ದಿನಾಂಕ: 09.04.2013 ರಲ್ಲಿನ ಚೆಕ್‌ಲಿಸ್ಟ್ ಅನುಬಂಧ-3ರನ್ವಯ ಮಾಹಿತಿ/ದಾಖಲೆಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಜಾರಿಯಲ್ಲಿರುವ ಅನುದಾನ ಸಂಹಿತೆ ಮತ್ತು ಸರ್ಕಾರದ ಆದೇಶ ಮತ್ತು ಸುತ್ತೋಲೆಗಳ ನಿಯಮಗಳನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳವುದು.
ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಾಗ ನಿಯಮಾನುಸಾರ ರೋಸ್ಟರ್ ಬಿಂದು ಮತ್ತು ಕಲ್ಯಾಣ ಕರ್ನಾಟಕದ ಮೀಸಲಾತಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
2016-17 ರಿಂದ 2023-24ನೇ ಸಾಲಿನವರೆಗೆ ವಿದ್ಯಾರ್ಥಿಗಳ ದಾಖಲಾತಿ, ಪರೀಕ್ಷಾ ಫಲಿತಾಂಶ ಮತ್ತು ಮೂಲಭೂತ ಸೌಕರ್ಯಗಳು ಉತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಶಾಲಾ/ಕಾಲೇಜುಗಳು ಪ್ರಾರಂಭವಾದಾಗಿನಿಂದ ಅವಿಚ್ಛಿನ್ನವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್ ಮೂಲಕ ವಿವರಗಳು ಮತ್ತು ದಾಖಲೆಗಳನ್ನು ಸಲ್ಲಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸುವುದು. ಈ ತಂತ್ರಾಂಶದ ಮೂಲಕ ಪ್ರಸ್ತಾವನೆಗಳನ್ನು ವ್ಯವಹರಿಸುವುದು.
ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿನ ಹುದ್ದೆಗಳನ್ನು ಅನುಮೋದಿಸಲು ಪ್ರತ್ಯಾಯೋಜಿಸಲಾದ ಆದೇಶ ಸಂಖ್ಯೆ: ಇಡಿ 16 ಟಿಪಿಯು 2011, ದಿನಾಂಕ:30.09.2011 ಅನ್ನು ಹಿಂಪಡೆಯಲಾಗಿದ್ದು, ಹುದ್ದೆಗಳ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುವುದು.



