ಬೆಂಗಳೂರು: ಶಾಲೆಗಳ ಪುನಾರಂಭದ ಬೆನ್ನಲ್ಲೇ ಮತ್ತೊಂದು ಅಡೆ ತಡೆ ಉಂಟಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ರುಪ್ಸಾ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮೌರ್ಯ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸಲಾಗುವುದು. ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟವಾಗಿರುವ ರುಪ್ಸಾ ಸಂಘಟನೆ ರಾಜ್ಯದಲ್ಲಿ 12,800 ಖಾಸಗಿ ಶಾಲೆಗಳನ್ನು ಹೊಂದಿರುವ ಸಂಘಟನೆಯಾಗಿದೆ. ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಇಂದು ರಾಜ್ಯದ 30 ಜಿಲ್ಲೆಗಳಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, 10 ಸಾವಿರ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸಂಕಷ್ಟದಲ್ಲಿರುವ ಶಾಲೆಗಳ ಶಿಕ್ಷಕರಿಗೆ ಪರಿಹಾರ ಘೋಷಣೆ ಮಾಡಬೇಕು. ಕನಿಷ್ಠ ಒಂದು ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಲಾಗಿದೆ. ಶಿಕ್ಷಕರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ನೀಡಬೇಕು. 1985 ರಿಂದ ಇರುವ ಅನುದಾನಿತ ಶಾಲೆ ಅನುದಾನಕ್ಕೆ ಒಳಪಡಿಸಬೇಕು. ನವೆಂಬರ್ 10 ರಂದು ಹೊರಡಿಸಿದ ಸುತ್ತೋಲೆ ಮರುಪರಿಶೀಲಿಸಬೇಕು. ಶಾಲೆಗಳ ಮಾನ್ಯತೆ ನವೀಕರಣ ಆದಾಲತ್ ರೂಪದಲ್ಲಿ ನಡೆಸಬೇಕು. ಗಡಿ ಭಾಗದ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ. ಈ ಹೋರಾಟಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ನೀಡಿಲ್ಲವೆನ್ನಲಾಗಿದೆ.