ಬೆಂಗಳೂರು: ಜನವರಿ 1 ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಕೊರೋನಾ ಎರಡನೆಯ ಅಲೆ ಮತ್ತು ರೂಪಾಂತರ ವೈರಸ್ ಸೃಷ್ಟಿಸಿದ ಆತಂಕದ ಹಿನ್ನೆಲೆಯಲ್ಲಿ ಶಾಲೆ ಆರಂಭ ಮತ್ತೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ವರದಿ ನಂತರ ರಾಜ್ಯ ಸರ್ಕಾರ ಶಾಲೆ ಆರಂಭದ ಬಗ್ಗೆ ಪುನರ್ ಪರಿಶೀಲನೆ ನಡೆಸಲಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಮಾತನಾಡಿ, ಕೊರೋನಾ ಹೊಸ ಸ್ವರೂಪದ ಕುರಿತು ನಿಖರವಾದ ಮಾಹಿತಿ ಬಂದಿಲ್ಲ. ನಿಗದಿಯಂತೆಯೇ ಶಾಲೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮಾರ್ಗದರ್ಶನದಂತೆ ನಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಶಾಲೆಗಳನ್ನು ಆರಂಭಿಸುವ ಬಗ್ಗೆ ಇನ್ನೊಮ್ಮೆ ಮುಖ್ಯಮಂತ್ರಿಗಳು, ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.