
ಬೆಂಗಳೂರು: ಬರೋಬ್ಬರಿ 10 ತಿಂಗಳ ನಂತರ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ.
10 ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ನಾಳೆಯಿಂದ ಆರಂಭವಾಗಲಿದ್ದು, ಇದರೊಂದಿಗೆ 6 ರಿಂದ 9ನೇ ತರಗತಿಗೆ ಶಾಲೆಗಳಲ್ಲಿ ವಿದ್ಯಾಗಮ ಕಲಿಕೆ ಶುರುವಾಗಲಿದೆ.
ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತರಗತಿಗಳನ್ನು ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ. ಮಧ್ಯಾಹ್ನದ ಬಿಸಿಯೂಟ ನೀಡುವುದಿಲ್ಲ, ಬದಲಿಗೆ ಆಹಾರಧಾನ್ಯ ವಿತರಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಶಿಕ್ಷಣ ಇಲಾಖೆ ನಿಗದಿಪಡಿಸಿದ ಪಠ್ಯ ಕ್ರಮವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ.