ಬೆಂಗಳೂರು: ಕೊರೋನಾ ನಡುವೆಯೂ ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತಾಗಿ ಸಮಾಲೋಚನೆ ನಡೆದಿದೆ. ಕಾಲೇಜುಗಳ ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದ್ದು, ಶಾಲೆಗಳನ್ನು ಕೂಡ ಆರಂಭಿಸಲು ಸಾಧಕ –ಬಾಧಕಗಳ ಕುರಿತಾಗಿ ಚರ್ಚೆ ನಡೆಸಲಾಗುತ್ತಿದೆ.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಶಾಲಾಭಿವೃದ್ಧಿ ಸಮಿತಿ ಪೋಷಕರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 9 ಮತ್ತು 10 ನೇ ತರಗತಿಗಳಿಗೆ ಶಾಲೆ ಆರಂಭಿಸಲು ಚಿಂತನೆ ನಡೆದಿದೆ. ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದರೊಂದಿಗೆ 9 ಹಾಗೂ 10 ನೇ ತರಗತಿ ಶಾಲೆ ಆರಂಭಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಿ, ಶಾಲೆ ಆರಂಭದ ಶಿಫಾರಸು ಮಾಡಲಿದೆ. ಆರೋಗ್ಯ ಇಲಾಖೆಯ ಸಲಹೆಗಳನ್ನು ಕೂಡ ಪರಿಗಣಿಸಿ ವರದಿ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಶಾಲೆ ಆರಂಭಕ್ಕೆ ಮೊದಲು ಹಾಸ್ಟೆಲ್ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ಹೊಣೆ ಸರ್ಕಾರ ವಹಿಸಿಕೊಳ್ಳದಿದ್ದರೆ ಶಾಲೆ ಬೇಡವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳಿವೆ.
ಇವೆಲ್ಲ ಮಾಹಿತಿ ಒಳಗೊಂಡ ವರದಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಇಲಾಖೆ ಆಯುಕ್ತ ಅನ್ಬುಕುಮಾರ್ ನೀಡಲಿದ್ದಾರೆ. ಶಾಲೆ ಆರಂಭದ ಕುರಿತಾಗಿ ಸಿಎಂ ಇಂದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಎನ್ನಲಾಗಿದೆ.