ಬೆಂಗಳೂರು: ಕಡಿಮೆ ಸೋಂಕು ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಕೋವಿಡ್ ನಿರ್ವಹಣೆ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುವುದು. ಒಂದು ವಾರ ಶಾಲೆಯನ್ನು ಮುಚ್ಚುವ ಜೊತೆಗೆ ಸ್ಯಾನಿಟೈಸ್ ಮಾಡಿ ವಾರದ ನಂತರ ಶಾಲೆ ಆರಂಭಿಸಲಾಗುವುದು. ಜಿಲ್ಲಾವಾರು ಪಾಸಿಟಿವಿಟಿ ದರ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೈಸೂರು, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ಹೆಚ್ಚಾಗಬೇಕಿದೆ. ಟೆಸ್ಟಿಂಗ್ ಜೊತೆಗೆ ವ್ಯಾಕ್ಸಿನೇಷನ್ ಕೂಡ ಹೆಚ್ಚಾಗಬೇಕಿದೆ. ಗ್ರಾಮಾಂತರ ಪ್ರದೇಶದಲ್ಲಿ ವ್ಯಾಕ್ಸಿನೇಷನ್ ಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಮಹಾರಾಷ್ಟ್ರ ಮತ್ತು ಕೇರಳ ಗಡಿಜಿಲ್ಲೆಗಳಲ್ಲಿ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ರಾಯಚೂರು, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಟೆಸ್ಟಿಂಗ್ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ. ಶಾಲೆಗಳನ್ನು ಆರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.