ಬೆಂಗಳೂರು: ಜುಲೈ 26 ರಿಂದ ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಆರಂಭವಾಗಲಿದ್ದು, ಆಗಸ್ಟ್ 2 ರಿಂದ ಶಾಲೆಗಳನ್ನು ಕೂಡ ಆರಂಭಿಸುವ ನಿರೀಕ್ಷೆಯಿದೆ.
ಡಾ. ದೇವಿಪ್ರಸಾದ್ ನೇತೃತ್ವದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ವರದಿ ಮತ್ತು ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆಯ ಪ್ರಸ್ತಾವನೆಯಂತೆ ರಾಜ್ಯದಲ್ಲಿ ಆಗಸ್ಟ್ 2 ರಿಂದ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗುವ ಸಾಧ್ಯತೆ ಇದ್ದು, ಸಿದ್ಧತೆ ಕೈಗೊಳ್ಳಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉಪನಿರ್ದೇಶಕರುಗಳಿಗೆ ಶಾಲೆಯ ಆರಂಭಕ್ಕೆ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಸ್ವಚ್ಛತಾ ಕಾರ್ಯ, ಸ್ಯಾನಿಟೈಸೇಶನ್ ಸೇರಿದಂತೆ ಶಾಲೆಗಳ ಕೊಠಡಿಗಳನ್ನು ಸಿದ್ಧಪಡಿಸಿ, ಮಕ್ಕಳ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಶೇಕಡ 80 ರಷ್ಟು ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ ಶಿಕ್ಷಕರಿಗೆ ಲಸಿಕೆ ಹಾಕಲಾಗಿದೆ. ಉಳಿದವರಿಗೂ ಶೀಘ್ರವೇ ಲಸಿಕೆ ಹಾಕಲು ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ.