ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲೆಗಳನ್ನು ಆರಂಭಿಸಲಾಗುತ್ತಿದೆ. 9, 10ನೇ ತರಗತಿ ಹಾಗೂ ಪಿಯುಸಿ ಕಾಲೇಜುಗಳನ್ನು ಆರಂಭಿಸಲಿದ್ದು, ಮುಂದಿನ ಹಂತದಲ್ಲಿ ಒಂದರಿಂದ 8 ನೇ ತರಗತಿಯನ್ನು ಕೂಡ ಆರಂಭಿಸಲು ಚಿಂತನೆ ನಡೆದಿದೆ.
ಆದರೆ, ಕೊರೋನಾ ಹೊತ್ತಲ್ಲಿ ಶಾಲೆಗಳನ್ನು ಆರಂಭಿಸಬಾರದು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಸಂಘ –ಫನಾ ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಆತಂಕದಲ್ಲಿ ಶಾಲೆಗಳನ್ನು ಆರಂಭಿಸುವುದು ಸರಿಯಲ್ಲ ಎಂದು ವರದಿ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ. ಮಕ್ಕಳಲ್ಲಿ ಕೊರೋನಾಗಿಂತ ಕೊರೋನೋತ್ತರ ಅನಾರೋಗ್ಯ ಸಮಸ್ಯೆಗಳು ಗಂಭೀರ ಪರಿಣಾಮ ಬೀರುತ್ತವೆ. ಹೀಗಾಗಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬಾರದು ಎಂದು ತಿಳಿಸಲಾಗಿದೆ.
9, 10ನೇ ತರಗತಿಗಳನ್ನು ಆರಂಭಿಸಿದರೂ, ಮುನ್ನೆಚ್ಚರಿಕೆ ಕೈಗೊಳ್ಳಬೇಕು. 8ನೇ ತರಗತಿ ಒಳಗಿನ ಮಕ್ಕಳಿಗೆ ಶಾಲೆ ಆರಂಭಿಸಬಾರದು. ಪ್ರತಿ ಶಾಲೆಯಲ್ಲೂ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳು ನಡೆಯಬೇಕು. ಶಾಲೆ ಶಿಕ್ಷಕರು, ಸಿಬ್ಬಂದಿಗೆ ಶೇಕಡ 100 ರಷ್ಟು ಲಸಿಕೆ ನೀಡಬೇಕು. ರೋಗಲಕ್ಷಣ ಇದ್ದವರನ್ನು ಕೂಡಲೇ ಪತ್ತೆ ಹಚ್ಚಿ ಪ್ರತ್ಯೇಕವಾಗಿರಬೇಕು. ಒತ್ತಡಕ್ಕೆ ಮಣಿದು ಶಾಲೆಗಳನ್ನು ಆರಂಭಿಸಿದರೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಶಾಲೆಗಳನ್ನು ಆರಂಭಿಸಿದರೂ 8ನೇ ತರಗತಿ ಒಳಗಿನ ಮಕ್ಕಳಿಗೆ ಆರಂಭಿಸಬಾರದು ಎಂದು ಹೇಳಲಾಗಿದೆ.