ಬೆಂಗಳೂರು: ಮೇ 16 ರಿಂದ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಕೆಲವೆಡೆ ಬಿರುಬೇಸಿಗೆ ಮುಂದುವರೆದಿದ್ದು, ಜೂನ್ 15 ರವರೆಗೂ ರಜೆ ವಿಸ್ತರಿಸಬೇಕೆಂದು ವಿಧಾನಪರಿಷತ್ ನ ಕೆಲವು ಸದಸ್ಯರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಮಕ್ಕಳು ಕಲಿಕಾ ಕೊರತೆ ಎದುರಿಸುತ್ತಿದ್ದು, ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಮೇ 16 ರಿಂದಲೇ ಶಾಲೆಗಳನ್ನು ಆರಂಭಿಸಿ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಇದೇ ಸಂದರ್ಭದಲ್ಲಿ ಕೆಲವು ವಿಧಾನಪರಿಷತ್ ಸದಸ್ಯರು ಬೇಸಿಗೆ ರಜೆಯನ್ನು ಒಂದು ತಿಂಗಳು ವಿಸ್ತರಿಸಬೇಕೆಂದು ಕೋರಿದ್ದಾರೆ.
ಇದು ಪೋಷಕರು ಮತ್ತು ವಿದ್ಯಾರ್ಥಿಗಳ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ವಲಯದಿಂದ ರಜೆ ವಿಸ್ತರಿಸುವ ಬೇಡಿಕೆಗೆ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಕೆಲವು ಶಾಸಕರು ರಜೆ ವಿಸ್ತರಿಸಲು ಆಗ್ರಹಿಸಿದ್ದಾರೆ. ಆದರೆ, ಕೊರೋನಾ ಕಾರಣದಿಂದಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ರೂಪಿಸಿ 15 ದಿನಗಳ ಮೊದಲೇ ಶಾಲೆ ಆರಂಭಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಪೂರ್ವ ನಿರ್ಧಾರದಂತೆ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.