ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಕೊಪ್ಪಳದ ಕಿಷ್ಕಿಂಧೆವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮನುಷ್ಯರಾಗಿ ನಾವು ಸುತ್ತಲಿನ ಪರಿಸರದಲ್ಲಿ ಏನೆಲ್ಲಾ ಕರ್ತವ್ಯ ನಿರ್ವಹಿಸಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಲು, ಅವರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ವಾರಕ್ಕೊಮ್ಮೆ ಪ್ರತ್ಯೇಕ ಮೌಲ್ಯ ಶಿಕ್ಷಣ ತರಬೇತಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ದೈನಂದಿನ ವಿದ್ಯಮಾನಗಳಿಗೆ ಸ್ಪಂದಿಸುವ ಬಗೆಯನ್ನು ಕಲಿಸಲಾಗುತ್ತದೆ. ಸಂಚಾರ ನಿಯಮಗಳು, ಆರೋಗ್ಯ ಮಾಹಿತಿ, ಪರಿಸರ ಸಂರಕ್ಷಣೆ, ಕೃಷಿ ಸೇರಿ ಸಾಮಾನ್ಯ ಜ್ಞಾನಕ್ಕೆ ಒತ್ತು ನೀಡಲಾಗುವುದು. ವ್ಯವಸ್ಥೆಯಲ್ಲಿ ಬದುಕುವ ರೀತಿ, ಹಾಳದ ವ್ಯವಸ್ಥೆ ಸರಿಪಡಿಸುವ ಕ್ರಮ ಕುರಿತಾಗಿ ಮೌಲ್ಯ ಶಿಕ್ಷಣ ತರಗತಿಯಲ್ಲಿ ಹೇಳಿಕೊಡಲಿದ್ದು, ಇದರ ಪಠ್ಯಕ್ರಮ ಹೇಗಿರಬೇಕು ಎನ್ನುವುದರ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸುತ್ತಿದೆ ಎಂದು ಹೇಳಿದ್ದಾರೆ.