ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಜನವರಿ 17, 18 ರಂದು ಕಲಿಕಾ ಸಾಧನಾ ಸಮೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
3, 5, 8, 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕಾ ಸಾಧನಾ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ರಾಜ್ಯದ 3038 ಶಾಲೆಗಳ 2,11,520 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಸಮೀಕ್ಷೆಗೆ ತರಗತಿವಾರು ಪ್ರಶ್ನೆ ಪತ್ರಿಕೆ ಸ್ವರೂಪ, ಭಾಷಾ ಮಾಧ್ಯಮ, ಸಮೀಕ್ಷಾ ಪ್ರಕ್ರಿಯೆ, ಉಪ ನಿರ್ದೇಶಕರು ಬಿಇಒ ಮತ್ತು ಶಿಕ್ಷಕರ ಪಾತ್ರವೇನು ಎಂಬುದರ ಕುರಿತು ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ತಿಳಿಸಿದೆ.
ಮೂರು ಮತ್ತು ಐದನೇ ತರಗತಿಗಳಿಗೆ ಕನ್ನಡ ಮಾಧ್ಯಮ, 8, 9 ಮತ್ತು 10ನೇ ತರಗತಿಗಳಿಗೆ ಕನ್ನಡ, ಇಂಗ್ಲಿಷ್ ಎರಡು ಮಾಧ್ಯಮಗಳಲ್ಲಿಯೂ ಸಮೀಕ್ಷೆ ನಡೆಸಲಾಗುವುದು.
ಮೂರು ಮತ್ತು ಐದನೇ ತರಗತಿಗೆ ಕನ್ನಡ ಮತ್ತು ಗಣಿತ, 5ನೇ ತರಗತಿಗೆ ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನ, 8, 9, 10ನೇ ತರಗತಿಗೆ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಕಲಿಕಾ ಸಾಧನಾ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿದೆ.