ದಕ್ಷಿಣ ಮುಂಬೈನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಭಾರ್ದಾ ನ್ಯೂ ಹೈಸ್ಕೂಲ್ ಇನ್ನು ಮುಂದೆ ಸಹ ಶಿಕ್ಷಣ ಸಂಸ್ಥೆಯಾಗಿ ಮಾರ್ಪಾಡಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಯಲ್ಲಿ ಹುಡುಗಿಯರೂ ವ್ಯಾಸಂಗ ಮಾಡಬಹುದಾಗಿದೆ.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಅದಾಗಲೇ 16 ಹೆಣ್ಣು ಮಕ್ಕಳು 132 ವರ್ಷ ಹಳೆಯದಾದ ಈ ಶಾಲೆಗೆ ದಾಖಲಾಗಿದ್ದಾರೆ.
ದೇಶದ ಆರ್ಥಿಕ ರಾಜಧಾನಿಯ ಈ ಪ್ರದೇಶದ ಅತ್ಯಂತ ಜನಪ್ರಿಯ ಶಾಲೆಗಳಲ್ಲಿ ಒಂದಾದ ಈ ಶಾಲೆಯಲ್ಲಿ ಸಹ ಶಿಕ್ಷಣ ಆರಂಭಿಸುವ ಮುನ್ನ ಬಹಳಷ್ಟು ಆಯಾಮಗಳಿಂದ ಪೂರ್ವ ತಯಾರಿ ನಡೆಸಿದ್ದು, ಈ ಸಂಬಂಧವಾಗಿ ಹೆಣ್ಣು ಮಕ್ಕಳ ಪೋಷಕರ ಅಭಿಪ್ರಾಯಗಳು ಹಾಗೂ ಸಲಹೆ-ಸೂಚನೆಗಳನ್ನು ಸೂಕ್ಷ್ಮವಾಗಿ ತೆಗೆದುಕೊಂಡು ಅಗತ್ಯ ಸಿದ್ಧತೆಗಳನ್ನು ಶಾಲಾ ಆಡಳಿತ ಮಾಡಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ದಾಖಲಾತಿಗಳು ಕಡಿಮೆಯಾಗುತ್ತಿರುವ ಕಾರಣ ಬಾಲಕಿಯರನ್ನು ಸಹ ಸೇರಿಸಿಕೊಳ್ಳಲು ಲಭ್ಯ ಮೂಲ ಸೌಕರ್ಯದಲ್ಲೇ ಸಾಕಷ್ಟು ಸ್ಥಳಾವಕಾಶವಿದ್ದು, ಅದಾಗಲೇ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳು ಹಾಗೂ ಕಾಮನ್ ರೂಂಗಳ ವ್ಯವಸ್ಥೆಗಳನ್ನು ಸಹ ಮಾಡಿಕೊಳ್ಳಲಾಗಿದೆ.
ಬಾಲಕರಂತೆ ಬಾಲಕಿಯರೂ ಸಹ ಶಾಲಾ ಸಮವಸ್ತ್ರವಾಗಿ ಪ್ಯಾಂಟ್-ಶರ್ಟ್ ಹಾಗೂ ಟೈ ಧರಿಸಲಿದ್ದಾರೆ.