ಚೀನಾ ಎಂದರೆ ಸಾಕು, ಇಡೀ ವಿಶ್ವಕ್ಕೆ ಅಗತ್ಯವಾದ ಎಲೆಕ್ಟ್ರಾನಿಕ್ ಸಾಧನಗಳು, ಆಟಿಕೆಗಳನ್ನು ತಯಾರಿಸಿ ಪೂರೈಕೆ ಮಾಡುವ ಕಾರ್ಖಾನೆ. ಅಂಥ ಚೀನಾದಲ್ಲಿ ಪ್ರತಿಭಾವಂತ ಮಕ್ಕಳು ಹೆಚ್ಚೆಚ್ಚು ಓದಿ, ಉತ್ತಮ ನೌಕರಿ ಹಾಗೂ ಕಂಪನಿಗಳಿಗೆ ಸೇರಲಿ. ಇಲ್ಲವೇ , ಸ್ವಂತ ಉದ್ದಿಮೆ ಸ್ಥಾಪಿಸಿ ದೇಶದ ಆರ್ಥಿಕತೆಗೆ ಪುಷ್ಟಿ ತುಂಬಲಿ ಎಂದು ಹಂದಿ ಮರಿಗಳನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ..!
ಹೌದು, ಚೀನಾದ ಯುನ್ನಾನ್ ಪ್ರಾಂತ್ಯದ ಯಿಲಿಯಾಂಗ್ ಗ್ರಾಮದ ಕ್ಸಿಯಾನ್‌ಗ್ಯಾಂಗ್ ಶಾಲೆಯಲ್ಲಿ ಈ ರೀತಿ ಮಾಡಲಾಗಿದೆ.
60 ಮಕ್ಕಳ ಪೈಕಿ ಉತ್ತಮ ವ್ಯಾಸಂಗ ಮಾಡುವ 20 ಮಕ್ಕಳನ್ನು ಆಯ್ಕೆ ಮಾಡಿ ಹಂದಿ ಮರಿ ಕೊಡಲಾಗಿದೆ. ಮರಿಗಳನ್ನು ಪ್ರಾಯೋಜಿಸಿದ್ದು ಶಾಂಕ್ಸಿಯಾಂಗ್ವು ಸಾರ್ವಜನಿಕ ಕಲ್ಯಾಣ ನಿಧಿಯಿಂದ. ಸಂಸ್ಥೆಯ ಅಧಿಕಾರಿಗಳ ಪ್ರಕಾರ ಪ್ರತಿಭಾವಂತ ಮಕ್ಕಳ ತಂದೆ-ತಾಯಿಯರು ಹಂದಿ ಸಾಕಣಿಕೆ ಮೂಲಕ ಸ್ವಂತ ಕಾಲಿನ ಮೇಲೆ ನಿಂತುಕೊಂಡು, ಆರ್ಥಿಕವಾಗಿ ಸದೃಢರಾಗಬೇಕಿದೆ. ಆ ಮೂಲಕ ಮಕ್ಕಳನ್ನು ಹೆಚ್ಚೆಚ್ಚು ಓದಿಸಿ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಬೇಕು ಎನ್ನುವುದು ನಮ್ಮ ಉದ್ದೇಶ ಎಂದಿದ್ದಾರೆ.
ಮೀಮ್‌ಗಳಿಗೆ ಒಳ್ಳೆ ಸರಕಾದ ಮುಂಬೈ ಚಳಿ
ಕೇವಲ ಒಂದು ಪ್ರಮಾಣಪತ್ರ ಅಥವಾ ಸ್ವಲ್ಪ ಹಣ ಕೊಡುವುದಕ್ಕಿಂತ ಮನೆಯ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಅಗತ್ಯವಾದ ಹಸು, ಹಂದಿ, ಕೋಳಿಗಳಂತಹ ಸಾಕುಪ್ರಾಣಿ, ಪಕ್ಷಿಗಳನ್ನು ಕೊಡುವುದು ಉತ್ತಮ ಅಭ್ಯಾಸ ಎಂದು ಟ್ವಿಟರ್‌ನಲ್ಲಿ ವಿಡಿಯೊ ನೋಡಿದ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಉಡುಗೊರೆಯಾಗಿ ನೀಡಲಾದ ಮರಿಗಳು 5-10 ಕೆ.ಜಿ. ತೂಕವಿದ್ದು, ಅವುಗಳನ್ನು ಬ್ಯಾಗ್‌ಗಳಲ್ಲಿ ಮತ್ತು ಕೈಗಳಲ್ಲಿ ಎತ್ತಿಕೊಂಡು ಜನರು ಸಾಗುತ್ತಿದ್ದ ವಿಡಿಯೊ ವೈರಲ್ ಆಗಿದೆ.