ನವದೆಹಲಿ: ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ರಾಯಲಸೀಮಾದಲ್ಲಿ ಇಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಪ್ರದೇಶಗಳಲ್ಲಿ ಮಳೆ ಇದೇ 15ರವರೆಗೆ ಮುಂದುವರಿಯಲಿದೆ. ಇಂದು ನೈಋತ್ಯ ಬಂಗಾಳ ಕೊಲ್ಲಿಯ ಅನೇಕ ಭಾಗಗಳಲ್ಲಿ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಪಕ್ಕದ ಪ್ರದೇಶಗಳಲ್ಲಿ, ಶ್ರೀಲಂಕಾ ಮತ್ತು ತಮಿಳುನಾಡಿನ ಕರಾವಳಿಯುದ್ದಕ್ಕೂ ಮತ್ತು ಅದರ ಹೊರಭಾಗದಲ್ಲಿ ಚಂಡಮಾರುತ ಹವಾಮಾನದ ಪರಿಸ್ಥಿತಿ ಇರಲಿದೆ. ಈ ಪ್ರದೇಶಗಳಿಗೆ ತೆರಳದಂತೆ ಮೀನುಗಾರರಿಗೆ ಐಎಂಡಿ ಸೂಚಿಸಿದೆ.
ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈನ ಜಿಲ್ಲಾಧಿಕಾರಿ ರಶ್ಮಿ ಸಿದ್ಧಾರ್ಥ್ ಝಾಗಡೆ ಅವರು ಇಂದು ನಗರದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಇದು ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ(IMD) ಯೆಲ್ಲೋ ಅಲರ್ಟ್ ನೀಡಿದೆ.
ಮುಂದಿನ ದಿನಗಳಲ್ಲಿ ವಿಶೇಷವಾಗಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕೆಲವು ಹಿಂಗಾರು ಮಳೆಯೊಂದಿಗೆ ಭಾರೀ ಮಳೆ ಮುಂದುವರೆಯಲಿದೆ ಎಂದು IMD ಎಚ್ಚರಿಸಿದೆ. ಹವಾಮಾನ ಬುಲೆಟಿನ್ ಪ್ರಕಾರ, ನವೆಂಬರ್ 12 ರಂದು 12 ಜಿಲ್ಲೆಗಳು, ನವೆಂಬರ್ 13 ರಂದು 17 ಜಿಲ್ಲೆಗಳು, ನವೆಂಬರ್ 14 ರಂದು 27 ಜಿಲ್ಲೆಗಳು ಮತ್ತು ನ. 15 ರಂದು 25 ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.