ಬೆಂಗಳೂರು: ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮೈದಾನ, ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ನಡೆಸಲು ನೀಡದಂತೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ವಿವಿಧ ಶಾಲೆಗಳಿಗೆ ಹುಸಿಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ಶಾಲೆಗೆ ಸಂಬಂಧಪಡದ ವ್ಯಕ್ತಿಗಳು ಶಾಲಾ ಆವರಣದಲ್ಲಿ ಅನಗತ್ಯವಾಗಿ ಓಡಾಡುವುದು ಕಂಡು ಬಂದಲ್ಲಿ, ಶಾಲಾ ಸುರಕ್ಷತೆಗೆ ಧಕ್ಕೆ ತರುವ ಅನಾಮಧೇಯ ಕರೆಗಳು, ಪತ್ರಗಳು ಬಂದರೆ ಸ್ಥಳೀಯ ಪೊಲೀಸರ ಗಮನಕ್ಕೆ ತರಬೇಕು ಎಂದು ತಿಳಿಸಲಾಗಿದೆ. ಶಾಲಾ ಆವರಣವನ್ನು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಬಳಸಬೇಕು. ಶೈಕ್ಷಣಿಕೇತರ ಚಟುವಟಿಕೆಗಳಿಗೆ ಸರ್ಕಾರದ ಅನುಮತಿ ಇಲ್ಲದೆ ಬಳಕೆ ಮಾಡಬಾರದು ಮತ್ತು ಅನುಮತಿ ನೀಡಬಾರದು ಎಂದು ಹೇಳಲಾಗಿದೆ.