
ಬೆಂಗಳೂರು: ಶಾಲೆ ಆವರಣದಲ್ಲಿ ಅನಗತ್ಯವಾಗಿ ಓಡಾಡುವವರು, ಸುರಕ್ಷತೆಗೆ ಭಂಗ ತರುವವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಶಾಲಾ ಶಿಕ್ಷಣ ಇಲಾಖೆ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ.
ಶಾಲೆಗೆ ಸಂಬಂಧವಿಲ್ಲದ ಯಾವುದೇ ವ್ಯಕ್ತಿಗಳು ಶಾಲೆ ಆವರಣದಲ್ಲಿ ಅನಗತ್ಯವಾಗಿ ಓಡಾಡುವುದು, ಶಾಲಾ ಸುರಕ್ಷತೆಗೆ ಭಂಗ ತರುವಂತಹ ಅನಾಮತೆಯ ದೂರವಾಣಿ ಕರೆ, ಪತ್ರ ಬಂದರೆ, ಶೈಕ್ಷಣಿಕ ಚಟುವಟಿಕೆಗೆ ಯಾರಾದರೂ ಅಡ್ಡಿಪಡಿಸಿದಲ್ಲಿ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯ ಪೊಲೀಸರ ಗಮನಕ್ಕೆ ತರಬೇಕು. ಮಕ್ಕಳ ಸುರಕ್ಷತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಮಕ್ಕಳನ್ನು ಬಳಸಬಾರದು ಎಂದು ಈಗಾಗಲೇ ಸೂಚನೆ ನೀಡಿದೆ. ಶಾಲಾ ಅವರಣವನ್ನು ವ್ಯಾಯಾಮ, ಕ್ರೀಡೆ, ಪಾಠ ಪ್ರವಚನ ಮತ್ತಿತರ ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.