ಬೆಂಗಳೂರು: ಶಾಲಾ ಶುಲ್ಕ ಪಾವತಿಸದೆ ಇದ್ದರೂ ಸದ್ಯಕ್ಕೆ ಆನ್ಲೈನ್ ಕ್ಲಾಸ್ ನಡೆಸಲು ಸಮ್ಮತಿಸಲಾಗಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ನಡೆಸಿದ ಸಭೆಯಲ್ಲಿ ಆನ್ಲೈನ್ ತರಗತಿ ಮುಂದುವರೆಸಲು ಸಮ್ಮತಿಸಲಾಗಿದೆ.
ಖಾಸಗಿ ಶಾಲೆಗಳು ಎಲ್ಲ ಮಕ್ಕಳಿಗೂ ನಿಗದಿಯಂತೆ ಆನ್ಲೈನ್ ತರಗತಿಯನ್ನು ನಡೆಸಲು ಒಪ್ಪಿಕೊಂಡಿವೆ. ಕೊರೋನಾ ಕಾರಣದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟಿರುವ ಖಾಸಗಿ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಮೊದಲು ಶುಲ್ಕ ಪಾವತಿಸದಿದ್ದರೆ ಆನ್ಲೈನ್ ತರಗತಿ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್ಲೈನ್ ಕ್ಲಾಸ್ ಮುಂದುವರಿಸಲು ಒಪ್ಪಿವೆ. ಇನ್ನು ಖಾಸಗಿ ಶಾಲೆಗಳ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದು, ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎನ್ನಲಾಗಿದೆ.