ಬೆಂಗಳೂರು: ಅನ್ಯ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವಂತಿಲ್ಲ, ಶೈಕ್ಷಣಿಕ ಉದ್ದೇಶಕ್ಕೆ ಜಾಗ ಮೀಸಲಿಡಬೇಕು ಭೂ ಪರಿವರ್ತನೆಗೆ ಸರ್ಕಾರ ಮೂರು ತಿಂಗಳ ಗಡವು ನೀಡಿದೆ.
ಹೊಸದಾಗಿ ಶಾಲೆ, ಪದವಿ ಪೂರ್ವ ಕಾಲೇಜು ತೆರೆಯಲು ಮಾನ್ಯತೆ ನವೀಕರಣ ಮಾಡಿಸಲು ಶಾಲಾ-ಕಾಲೇಜುಗಳ ನಿವೇಶನಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಭೂ ಪರಿವರ್ತನೆಗೆ ಮೂರು ತಿಂಗಳ ಗಡುವು ನಿಗದಿಪಡಿಸಲಾಗಿದೆ.
ಕೃಷಿ ಜಮೀನು, ವಸತಿ, ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಭೂ ಪರಿವರ್ತನೆಯಾದ ಸ್ಥಳಗಳಲ್ಲಿ ಶಾಲಾ-ಕಾಲೇಜುಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಯಲ್ಲಿ ಬರುವ ಮತ್ತು ಗ್ರಾಮ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಖಾತೆ ಹೊಂದಿರುವ ಸ್ಥಳ ಹೊರತುಪಡಿಸಿ ಕೃಷಿ, ವಾಣಿಜ್ಯ, ವಾಸ, ಕೈಗಾರಿಕೆ ಹಾಗೂ ಇತರೆ ಉದ್ದೇಶಗಳಿಗೆ ಭೂ ಪರಿವರ್ತನೆ ಆಗಿದ್ದಲ್ಲಿ ಅಂತಹ ಸ್ಥಳಗಳಲ್ಲಿ ಶಾಲೆ ಆರಂಭಿಸಲು ಅವಕಾಶ ನೀಡುವುದಿಲ್ಲ. ಶೈಕ್ಷಣಿಕ ಉದ್ದೇಶಕ್ಕಾಗಿ ಪರಿವರ್ತನೆ ಆಗಿದ್ದಲ್ಲಿ ಮಾತ್ರ ಪರಿಗಣಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.