ಬೆಂಗಳೂರು: ಶಾಲೆಗಳಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ವೈರಸ್ ಹರಡುವಿಕೆ ತಡೆಯಲು ಹಾಗೂ ಸಾರ್ವಜನಿಕ ಆರೋಗ್ಯದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮಹತ್ವದ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿನ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಎಲ್.ಕೆ.ಜಿ.-ಯುಕೆಜಿ ಹಾಗೂ 1 ರಿಂದ 9 ನೇ ತರಗತಿಯವರಿಗೆ ಭೌತಿಕ ತರಗತಿಗಳನ್ನು ಜನವರಿ 6 ರಿಂದ 19 ರವರೆಗೆ ಅಥವಾ ಮುಂದಿನ ಆದೇಶದವರೆಗೆ ತಾತ್ಕಲಿಕವಾಗಿ ಸ್ಥಗಿತಗೊಳಿಸಲು ತಿಳಿಸಲಾಗಿದೆ.
ಈ ಅವಧಿಯಲ್ಲಿ ಪರ್ಯಾಯ ಮಾರ್ಗಗಳು ಅಂದರೆ ಆನ್ಲೈನ್ ಕ್ಲಾಸ್ ಇತರೆ ಮಾರ್ಗಗಳ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ/ಬೋಧನಾ ಚಟುವಟಿಕೆಗಳನ್ನು ಮುಂದುವರಿಸಲು ತಿಳಿಸಲಾಗಿದೆ. 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂಜಾಗ್ರತೆ ಕ್ರಮಗಳೊಂದಿಗೆ ಭೌತಿಕ ತರಗತಿಗಳನ್ನು ನಡೆಸಲು ತಿಳಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳ ಶಾಲೆಗಳಲ್ಲಿ ಮಾರ್ಗಸೂಚಿ, ಮುಂಜಾಗ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲಾಡಳಿತಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳ ಅನುಸಾರ ಯಥಾಸ್ಥಿತಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ನಡೆಸಲು ತಿಳಿಸಲಾಗಿದೆ.