ಬೆಂಗಳೂರು: ಖಾಸಗಿ ಶಾಲೆಗಳ ಕಳ್ಳಾಟ ತಡೆಗೆ ಸರ್ಕಾರ ಮುಂದಾಗಿದ್ದು, ಶಾಲೆಗಳ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಕೆಲವು ಶಾಲೆಗಳಲ್ಲಿ ಸಿಬಿಎಸ್‌ಇ ಬೋಧನೆ ಮಾಡಲಾಗುತ್ತಿದೆ ಎಂದು ಪೋಷಕರಿಂದ ದುಬಾರಿ ಶುಲ್ಕ, ಡೊನೇಷನ್ ಪಡೆದು ವಂಚಿಸಲಾಗುತ್ತಿದೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜಧಾನಿ ಬೆಂಗಳೂರು ಮಾತ್ರವಲ್ಲದೇ, ರಾಜ್ಯಾದ್ಯಂತ ಅನೇಕ ಶಾಲೆಗಳಲ್ಲಿ ಅನುಮತಿ ಪಡೆಯದೆ ಕೇಂದ್ರ ಪಠ್ಯಕ್ರಮ ಬೋಧನೆ ಮಾಡುತ್ತಿರುವುದು ತಿಳಿದುಬಂದಿದೆ. ಶಿಕ್ಷಣ ಇಲಾಖೆಯಿಂದ ನೋಟಿಸ್ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.
ರಾಜ್ಯದ ಎಲ್ಲಾ ಶಾಲೆಗಳ ಮತ್ತು ಬೋಧನಾ ಮಂಡಳಿಗಳ ಮಾಹಿತಿಯನ್ನು ಜನತೆಗೆ ತಿಳಿಸಲು ಅವಕಾಶವಿದೆಯೇ ಎಂಬುದರ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದ ಶುಲ್ಕದ ವಿವರ ಶಾಲೆಯಲ್ಲಿ ಬೋಧಿಸುವ ಪಠ್ಯಕ್ರಮ ಮೂಲಸೌಕರ್ಯ ಪಠ್ಯೇತರ ಚಟುವಟಿಕೆ ಮೊದಲಾದ ಮಾಹಿತಿಗಳನ್ನು ಇಲಾಖೆಗೆ ನೀಡಿ ಶಾಲಾ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುವಂತೆ ತಿಳಿಸಲಾಗಿದೆ. ಮೂರು ದಿನಗಳಲ್ಲಿ ಸಚಿವರು ಶಿಕ್ಷಣ ಇಲಾಖೆ ಸಭೆ ನಡೆಸಿ ಈ ಕುರಿತಾಗಿ ತೀರ್ಮಾನ ಕೈಗೊಂಡಿದೆ. ಖಾಸಗಿ ಶಾಲೆಗಳ ಕಳ್ಳಾಟಕ್ಕೆ ತಡೆ ನೀಡಿ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಿರುವಂತೆ ಮಾಡಲಾಗುವುದು ಎಂದು ಹೇಳಲಾಗಿದೆ.