ಬೆಂಗಳೂರು: ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸದ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟ ತೀರ್ಮಾನಿಸಿದೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಇಂತಹ ನಿಲುವಿನಿಂದ 10,000 ಖಾಸಗಿ ಶಾಲೆಗಳು ಬಂದ್ ಆಗುವ ಆತಂಕ ಎದುರಾಗಿದೆ. ಶಾಲೆಗಳು ಬಂದ್ ಆದಲ್ಲಿ ಲಕ್ಷಾಂತರ ಶಿಕ್ಷಕರ ಕುಟುಂಬಗಳು ಬೀದಿ ಪಾಲಾಗಲಿವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎನ್ನಲಾಗಿದೆ.
ಶಿಕ್ಷಣ ಇಲಾಖೆ ವತಿಯಿಂದ ನವೆಂಬರ್ 10 ರಂದು ಹೊರಡಿಸಿದ ಆದೇಶದ ವಿರುದ್ಧ ಖಾಸಗಿ ಶಾಲೆಗಳು ಹೋರಾಟ ನಡೆಸಲು ಮುಂದಾಗಿವೆ. ಮಕ್ಕಳ ಸುರಕ್ಷತೆ ಹೆಸರಲ್ಲಿ ಖಾಸಗಿ ಶಾಲೆಗಳು ಹಣ ವಸೂಲಿಗೆ ಇಳಿದಿವೆ. ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಮಾನ್ಯತೆಯನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಶಾಲೆಗಳಿಗೆ ನೆರವು ನೀಡುವ ಬದಲಿಗೆ ಕಿರುಕುಳ ನೀಡಲಾಗುತ್ತಿದೆ. ಖಾಸಗಿ ಶಾಲೆಗಳನ್ನು ಗುರಿಯಾಗಿಸಿಕೊಂಡು ಮುಚ್ಚಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.