ಬೆಂಗಳೂರು: ಶೇಕಡ 30 ರಷ್ಟು ಶಾಲಾ ಶುಲ್ಕ ಕಡಿತ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳಿಂದ ಮಂಗಳವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ರಾಜ್ಯ ಸರ್ಕಾರ ಶುಲ್ಕ ಕಡಿತ ಮಾಡಿರುವುದನ್ನು ವಿರೋಧಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರ ಮಾತ್ರ ಬದಲಿಸಿಲ್ಲ. ಶುಲ್ಕ ಕಡಿತ ನಿರ್ಧಾರ ಪುನರ್ ಪರಿಶೀಲಿಸುವ ಪ್ರಶ್ನೆಯೇ ಇಲ್ಲವೆಂದು ಸರ್ಕಾರ ಹೇಳಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪೂರಕವಾಗುವಂತೆ ಶೇಕಡ 30ರಷ್ಟು ಶುಲ್ಕ ಕಡಿತ ಮಾಡಲಾಗಿದೆ. ಇದರ ಹೊರತಾಗಿ ಪರ್ಯಾಯ ಮಾರ್ಗವಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲರಿಗೂ ಸಮ್ಮತವಾಗುವ ನಿರ್ಧಾರ ಕೈಗೊಂಡ ಬಳಿಕ ಶುಲ್ಕ ಕಡಿತ ಮಾಡಲಾಗಿದೆ. ಪೋಷಕರು ಕೂಡ ಶಾಲೆಗಳಿಗೆ ಶುಲ್ಕ ಪಾವತಿಸಲು ಮುಂದಾಗಿದ್ದಾರೆ. ಆ ಶುಲ್ಕದಿಂದ ಶಿಕ್ಷಕರ ವೇತನ ಪಾವತಿಸಲು ಅನುಕೂಲವಾಗಿದೆ. ಇಂತಹ ಸಂದರ್ಭದಲ್ಲಿ ಶುಲ್ಕ ಕಡಿತ ನಿರ್ಧಾರ ಪುನರ್ ಪರಿಶೀಲಿಸುವ ಪ್ರಶ್ನೆಯೇ ಇಲ್ಲವೆಂದು ಹೇಳಲಾಗಿದೆ.