ಬೆಂಗಳೂರು: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮತ್ತೆ ಬರೆ ಬೀಳಲಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಇಲ್ಲವೆಂದು ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ ಶಾಲೆಗಳು 30 ರಿಂದ 40ರಷ್ಟು ಶುಲ್ಕ ಹೆಚ್ಚಳ ಮಾಡಲು ಮುಂದಾಗಿವೆ.
2022 -23ನೇ ಸಾಲಿನ ಶೈಕ್ಷಣಿಕ ವರ್ಷ ಮುಕ್ತಾಯವಾಗಿದ್ದು, ಅನೇಕ ಶಾಲೆಗಳಲ್ಲಿ 2023 -24ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಕಳೆದ ವರ್ಷಕ್ಕಿಂತ ಶಾಲಾ ಶುಲ್ಕದಲ್ಲಿ ಶೇಕಡ 30 ರಿಂದ 40 ರಷ್ಟು ಏರಿಕೆ ಮಾಡಲಾಗಿದೆ. ಈ ಕುರಿತಾಗಿ ಪೋಷಕರಿಗೆ ಮೆಸೇಜ್, ಇ-ಮೇಲ್ ಕಳುಹಿಸಿ ಕೆಲವೆಡೆ ಸೂಚನಾ ಫಲಕಗಳಲ್ಲಿಯೂ ಪ್ರಕಟಿಸಲಾಗಿದೆ. ಇದರಿಂದಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಿದ್ದು, ಖಾಸಗಿ ಶಾಲೆಗಳ ವಿರುದ್ಧ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.