ಬೆಂಗಳೂರು: ಆನ್ಲೈನ್ ತರಗತಿ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟದೊಂದಿಗೆ ಶಿಕ್ಷಣ ಇಲಾಖೆಯಿಂದ ಇಂದು ಮಹತ್ವದ ಸಭೆ ನಡೆಸಲಾಗುವುದು.
ಆನ್ ಲೈನ್ ತರಗತಿ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ನಡುವೆ ತಿಕ್ಕಾಟ ನಡೆದಿದೆ. ಶುಲ್ಕ ಪಡೆಯದಿದ್ದರೆ ಶಾಲೆಗಳ ನಿರ್ವಹಣೆ, ವೇತನ, ಖರ್ಚುವೆಚ್ಚ ನಿಭಾಯಿಸಲು ತೊಂದರೆಯಾಗುತ್ತದೆ ಎಂದು ಖಾಸಗಿ ಶಾಲೆಗಳು ಹೇಳಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ.
ಸಭೆಯ ನಂತರ ಸರ್ಕಾರದ ನಿರ್ಧಾರ ಪ್ರಕಟಿಸಲಾಗುವುದು. ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸೇರಿದಂತೆ ಶಾಲೆಗಳ ಆಡಳಿತ ಮಂಡಳಿಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.