
ಬೆಂಗಳೂರು: ರಾಜ್ಯದ ಯಾವುದೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕವನ್ನು ಶೇಕಡ 15ಕ್ಕಿಂತ ಹೆಚ್ಚು ಹೆಚ್ಚಳ ಮಾಡಿದಲ್ಲಿ ಕೇಸು ದಾಖಲಿಸುತ್ತೇವೆ. ಪೋಷಕರು ಹೆಚ್ಚು ಶುಲ್ಕದ ಸಾಕ್ಷಿ ನೀಡಿದರೆ ನಾವೇ ಕೇಸ್ ಹಾಕುತ್ತೇವೆ ಎಂದು ಕ್ಯಾಮ್ಸ್ ಸೇರಿದಂತೆ 12 ಶಾಲಾ ಸಂಘಟನೆಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಖಾಸಗಿ ಶಾಲೆಗಳು ಮನಸ್ಸೋ ಇಚ್ಛೆ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಆ ರೀತಿ ಶುಲ್ಕ ಹೆಚ್ಚಳ ಮಾಡಿದರೆ ಪೋಷಕರು ನಮಗೆ ಅಥವಾ ಶಿಕ್ಷಣ ಇಲಾಖೆಗೆ ದೂರು ನೀಡಬೇಕು ಎಂದು ಕರ್ನಾಟಕ ಶಾಲಾ ಆಡಳಿತ ಮಂಡಳಿ ಬೋಧಕ ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಮನವಿ ಮಾಡಿದೆ.
ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಶೇಕಡ 30 ರಿಂದ 40 ರಷ್ಟು ಶುಲ್ಕ ಹೆಚ್ಚಳ ಮಾಡಿರುವುದನ್ನು ಪೋಷಕರು ವಿರೋಧಿಸಿದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಸಮನ್ವಯ ಸಮಿತಿ ಕ್ಯಾಮ್ಸ್, ಕುಸುಮ, ಮಾಸ್, ಮಿಸ್ಕಾ ಸೇರಿದಂತೆ 12 ಸಂಘಟನೆಗಳ ಸಭೆ ನಡೆಸಿ ಒಮ್ಮತದ ನಿರ್ಧಾರ ಕೈಗೊಂಡಿವೆ.
ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ಶೇಕಡ 10 ರಿಂದ 15 ರಷ್ಟು ಮಾತ್ರ ಶುಲ್ಕ ಹೆಚ್ಚಿಸಬೇಕು. ಯಾವುದೇ ಶಾಲೆಗಳಲ್ಲಿ ವಾರ್ಷಿಕ ಶುಲ್ಕ ಶೇಕಡ 10 ರಿಂದ 15 ರ ಮಿತಿಯೊಳಗಿರಬೇಕು. ಅದಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಾಲೆಗಳ ವಿರುದ್ಧ ಸಂಘಟನೆಗಳ ಕ್ರಮ ಕೈಗೊಳ್ಳುತ್ತೇವೆ. ಕೆಲವು ಶಾಲೆಗಳು ಅಧಿಕ ಶುಲ್ಕ ಪಡೆಯುವುದರಿಂದ ಖಾಸಗಿ ಶಾಲೆಗಳು ಮುಜುಗರಕ್ಕೀಡಾಗಬೇಕಾಗುತ್ತದೆ. ಶುಲ್ಕ ಜಾಸ್ತಿಯಾದರೆ ಪೋಷಕರಿಗೆ ಕಷ್ಟವಾಗುತ್ತದೆ. ನಿಗದಿತ ಪ್ರಮಾಣದಲ್ಲಿ ಶುಲ್ಕ ಏರಿಕೆ ಮಾಡಬೇಕು. ಅದಕ್ಕಿಂತ ಹೆಚ್ಚು ಮಾಡಿದಲ್ಲಿ ಪೋಷಕರು ಸಂಘಟನೆಗೆ ಅಥವಾ ಶಿಕ್ಷಣ ಇಲಾಖೆಗೆ ದೂರು ನೀಡಬಹುದು ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಉಪಾಧ್ಯಕ್ಷ ಎಂ. ಶ್ರೀನಿವಾಸನ್ ತಿಳಿಸಿದ್ದಾರೆ.
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಶಾಲೆಯ ಗುಣಮಟ್ಟ ಮತ್ತು ವ್ಯವಸ್ಥೆಗೆ ತಕ್ಕಂತೆ ಶುಲ್ಕ ರಚನೆ ರೂಪಿಸಲು ಶಾಲೆಗಳಿಗೆ ಸ್ವಾತಂತ್ರ್ಯವಿದೆ. ಹೈಕೋರ್ಟ್ ಕೂಡ ನಮ್ಮ ಪರವಾಗಿ ತೀರ್ಪು ನೀಡಿದೆ. ಸರ್ಕಾರ ಶುಲ್ಕದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಆದೇಶಿಸಿದೆ. ಶಾಲಾ ಸೂಚನಾ ಫಲಕದಲ್ಲಿ, ವೆಬ್ಸೈಟ್ ನಲ್ಲಿ ಶುಲ್ಕದ ಮಾಹಿತಿಯನ್ನು ಪ್ರಕಟಿಸುತಿದ್ದೇವೆ. ಎಲ್ಲಿಯೂ ಮುಚ್ಚುಮರೆ ಮಾಡುತ್ತಿಲ್ಲ. ಖಾಸಗಿ ಶಾಲೆಗಳಲ್ಲಿ ಮನಸ್ಸೋ ಇಚ್ಛೆ ಶುಲ್ಕ ಹೆಚ್ಚಳ ಮಾಡಿದ್ದಲ್ಲಿ ಪೋಷಕರು ಧ್ವನಿ ಎತ್ತುವ ಹಕ್ಕು ಹೊಂದಿದ್ದಾರೆ. ಅವರು ಸೂಕ್ತ ಪುರಾವೆಗಳೊಂದಿಗೆ ದೂರು ನೀಡಿದರೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.
ಅಲ್ಲದೇ, ಅನಧಿಕೃತ ಶಾಲೆಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಶಿಕ್ಷಣ ಇಲಾಖೆ ಪ್ರಕಟಿಸಬೇಕು. ಇದರಿಂದ ಪೋಷಕರು ಅಂತಹ ಶಾಲೆಗಳನ್ನು ಬಿಟ್ಟು ಬೇರೆ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.