ಬೆಂಗಳೂರು: ಕೊರೋನಾ ಸಂಕಷ್ಟದ ಹೊತ್ತಲ್ಲೇ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊರೋನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದವು. ನಂತರದಲ್ಲಿ ಪ್ರೌಢಶಾಲೆಗಳು ಆರಂಭವಾದರೂ ಸರಿಯಾಗಿ ನಡೆಯಲಿಲ್ಲ. ಆನ್ಲೈನ್, ಆಫ್ಲೈನ್ ತರಗತಿಗಳು ನಡೆದಿವೆ. ಒಂದರಿಂದ 9ನೇ ತರಗತಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿದೆ. 10ನೇ ತರಗತಿ ಪರೀಕ್ಷೆ ನಿಗದಿಯಂತೆಯೇ ನಡೆಯಲಿದೆ.
ಒಂದರಿಂದ 9ನೇ ತರಗತಿ ಮಕ್ಕಳು ಮುಂದಿನ ತರಗತಿಗೆ ಬಡ್ತಿ ಪಡೆದಿದ್ದು ಅವರನ್ನು ಶಾಲೆಗೆ ಸೇರಿಸಲು ಪೋಷಕರಿಗೆ ಶುಲ್ಕದ ಹೊರೆ ಎದುರಾಗಿದೆ ಎಂದು ಹೇಳಲಾಗಿದೆ. ಶಾಲೆ ಪ್ರವೇಶಾತಿಗೆ ಇನ್ನೂ ಸಮಯ ನಿಗದಿ ಮಾಡಿಲ್ಲವಾದರೂ ಅನೇಕ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆದಿದೆ. ಕೆಲ ಶಾಲೆಗಳು ಶೇಕಡ 25 ರಷ್ಟು ಶುಲ್ಕ ಏರಿಕೆ ಮಾಡಿವೆ. ಪ್ರತಿಷ್ಠಿತ ಶಾಲೆಗಳಲ್ಲಿ ಶುಲ್ಕ ದುಬಾರಿಯಾಗಿದೆ. ಕಳೆದ ವರ್ಷ ಶೇಕಡ 70 ರಷ್ಟು ಶುಲ್ಕ ಪಾವತಿಸಲು ಸರ್ಕಾರ ಅವಕಾಶ ನೀಡಿತ್ತು.
ಈ ವರ್ಷ ಶೇಕಡ 25 ರಷ್ಟು ಶುಲ್ಕ ಹೆಚ್ಚಳ ಮಾಡಿರುವ ಕೆಲವು ಖಾಸಗಿ ಶಾಲೆಗಳು, ಪೂರ್ಣ ಶುಲ್ಕ ಪಾವತಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಶಾಲೆ, ಆನ್ಲೈನ್ ಕ್ಲಾಸ್ ನಡೆಸಲು ಆರ್ಥಿಕ ಹೊರೆಯಾಗುತ್ತದೆ. ಸರ್ಕಾರ ಖಾಸಗಿ ಶಾಲೆಗಳ ನೆರವಿಗೆ ಮುಂದಾಗಿಲ್ಲ. ಇವೆಲ್ಲ ಕಾರಣದಿಂದ ಕೆಲವು ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದ್ದು, ಒಟ್ಟಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.