ಶಿವಮೊಗ್ಗ: ರಜಾ ದಿನ ಹೊರತುಪಡಿಸಿ ವಾರದ ಆರು ದಿನವೂ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿ, ಶೇಕಡ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರನ್ನು ಅಭಿನಂದಿಸಿ ಅವರು ಮಾತನಾಡಿದರು.
ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ ಆರು ದಿನವೂ ಮೊಟ್ಟೆ ವಿತರಿಸಲಾಗುವುದು. ಈ ಮೊದಲು ಎಂಟನೇ ತರಗತಿವರೆಗಿನ ಮಕ್ಕಳಿಗೆ ವಾರದಲ್ಲಿ ಒಮ್ಮೆ ಮಾತ್ರ ಮೊಟ್ಟೆ ವಿತರಿಸಲಾಗುತ್ತಿತ್ತು. ಅದನ್ನು 10ನೇ ತರಗತಿವರೆಗೆ ವಿಸ್ತರಿಸಿದ್ದು, ವಾರದಲ್ಲಿ ಒಂದು ದಿನದ ಬದಲು ಎರಡು ದಿನಕ್ಕೆ ಹೆಚ್ಚಿಸಲಾಗಿತ್ತು. ಇನ್ನು ವಾರವಿಡೀ ಮೊಟ್ಟೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.