
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಕೈಗೊಂಡಿದ್ದ ಖಾಸಗಿ ಶಾಲೆಗಳ ಮನವೊಲಿಸುವಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಯಶಸ್ವಿಯಾಗಿದ್ದಾರೆ.
ರುಪ್ಸಾ ಸಂಘಟನೆ, ಮತ್ತು ಕಾಮ್ಸ್ ಸಂಘಟನೆಗಳೊಂದಿಗೆ ಸಚಿವ ಮಧು ಬಂಗಾರಪ್ಪ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಹೋರಾಟ ಕೈಬಿಡುವಂತೆ ಮನವೊಲಿಸಿದ್ದಾರೆ. ಒಂದು ಕಡೆ ಆಗಸ್ಟ್ 21ರ ನಂತರ ರುಪ್ಸಾ ಸಂಘಟನೆ ಪ್ರತಿಭಟನೆಗೆ ಮುಂದಾಗಿತ್ತು. ಮತ್ತೊಂದು ಕಡೆ ಕರಾಳ ಸ್ವಾತಂತ್ರ್ಯ ದಿನಾಚರಣೆಗೆ ಕಾಮ್ಸ್ ಮುಂದಾಗಿತ್ತು. ಎರಡೂ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ಅವರ ಮನವೊಲಿಸುವಲ್ಲಿ ಮಧು ಬಂಗಾರಪ್ಪ ಮತ್ತು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹೀಗಾಗಿ ಧರಣಿ ಮತ್ತು ಕರಾಳ ಸ್ವಾತಂತ್ರ್ಯ ದಿನಾಚರಣೆಯನ್ನು ರುಪ್ಸಾ ಮತ್ತು ಕಾಮ್ಸ್ ಸಂಘಟನೆ ಹಿಂಪಡೆದುಕೊಂಡಿವೆ.