
ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡಲು ನಿಯಮದ ಪ್ರಕಾರ ಸಾಧ್ಯವಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ದೈಹಿಕ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಸಾಧ್ಯವಿಲ್ಲ. ಆದರೂ, ಪ್ರೊ. ಎಲ್.ಆರ್. ವೈದ್ಯನಾಥನ್ ವರದಿ ಆಧರಿಸಿ ಮುಂಬಡ್ತಿ ನೀಡುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳು ಬೇರೆ ಬೇರೆಯಾಗಿರುತ್ತದೆ. ಜೊತೆಗೆ ಸಹಶಿಕ್ಷಕರಿಗೆ ಬಿಎಡ್ ಪದವಿ ನಿಗದಿಪಡಿಸಲಾಗಿದ್ದರೆ, ದೈಹಿಕ ಶಿಕ್ಷಣ ಶಿಕ್ಷಕರು ಬಿಎಡ್ ಪದವಿ ಹೊಂದಿರುವುದಿಲ್ಲ. ಜೊತೆಗೆ ಶಿಕ್ಷಕರು ಬೋಧನೆಯಲ್ಲಿ ಅನುಭವ, ಪ್ರಾವೀಣ್ಯತೆ ಹೊಂದಿರುತ್ತಾರೆ. ಹೀಗಾಗಿ ದೈಹಿಕ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಲು ನಿಯಮಾವಳಿ ಪ್ರಕಾರ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.