ಬೆಂಗಳೂರು: ಖಾಸಗಿ ಶಾಲೆಗಳ ಮಾನ್ಯತೆ 10 ವರ್ಷಕ್ಕೊಮ್ಮೆ ನವೀಕರಣ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಮರಿತಿಬ್ಬೇಗೌಡ, ಎಸ್.ವಿ. ಸಂಕನೂರ ಅವರು ನಿಯಮ 330 ರ ಅಡಿ ಮಂಡಿಸಿದ ಸೂಚನೆಗೆ ಉತ್ತರ ನೀಡಿದ ಸಚಿವರು, ಖಾಸಗಿ ಶಾಲೆಗಳು 2017 -2018ನೇ ಶೈಕ್ಷಣಿಕ ಸಾಲಿಗಿಂತ ಹಿಂದೆ ಅನುಮತಿ ಪಡೆದಿದ್ದರೆ ಅವುಗಳ ಮಾನ್ಯತೆ ಅವಧಿಯನ್ನು 10 ವರ್ಷಕ್ಕೊಮ್ಮೆ ನವೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಗ್ನಿಶಾಮಕ ಸುರಕ್ಷತಾ ಕ್ರಮಗಳು, ಕಟ್ಟಡ ಸುರಕ್ಷತೆ ವಿಚಾರವಾಗಿ ಶಿಕ್ಷಣ ಇಲಾಖೆ ವತಿಯಿಂದ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಸುರಕ್ಷತೆ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶ ಕೂಡ ಇದೆ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷತನ ತೋರಲಾಗದು, ಹಾಲಿ ಐದು ವರ್ಷಕ್ಕೊಮ್ಮೆ ನವೀಕರಣ ಮಾಡುತ್ತಿದ್ದು, ಹೈಕೋರ್ಟ್ ಆದೇಶದ ಅನುಸಾರ 10 ವರ್ಷಗಳಿಗೊಮ್ಮೆ ನವೀಕರಿಸುವ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.