ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಶಾಲೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.
18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ತಡೆ ಉದ್ದೇಶದಿಂದ ಮಕ್ಕಳಿಗೆ ರಕ್ಷಣೆ, ಭದ್ರತೆ, ನ್ಯಾಯ ಒದಗಿಸುವ ಜೊತೆಗೆ ಅವರ ಆಸಕ್ತಿ, ಹಿತ ಕಾಪಾಡುವ ಉದ್ದೇಶದಿಂದ ಶಾಲೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚಿಸಲಾಗಿದೆ,
ಪೋಕ್ಸೊ ಕಾಯ್ದೆ ಅನುಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ -2016 ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು, ಶಾಲೆಗಳು, ಆಡಳಿತ ಮಂಡಳಿಗಳು, ಪೋಷಕರು, ಎಸ್.ಡಿ.ಎಂ.ಸಿ. ಇತರರು ಸೇರಿ ಎಲ್ಲ ಪಾಲುದಾರರು ಕೈಗೊಳ್ಳಬೇಕಿರುವ ಕ್ರಮಗಳನ್ನು ಒಳಗೊಂಡ ಪ್ರಮಾಣಿಕೃತ ಕಾರ್ಯಾಚರಣೆ ಮತ್ತು ಮಾರ್ಗಸೂಚಿಯನ್ನು ಆಯೋಗ ಈಗಾಗಲೇ ನೀಡಿದೆ.
ಶಾಲೆಗಳು ಪ್ರಾರ್ಥನಾ ಸಮಯ, ಬಿಡುವಿನ ವೇಳೆ, ಬೋಧನಾ ಅವಧಿ, ವಿವಿಧ ಸಾಂಸ್ಕೃತಿಕ ಚಟುವಟಿಕೆ, ರಾಷ್ಟ್ರೀಯ ಹಬ್ಬ, ಪೋಷಕರ ಸಭೆಯಲ್ಲಿ ಜಾಗೃತಿ ಮೂಡಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಇಲಾಖೆ ಆಯುಕ್ತರು ಶಾಲೆಗಳಿಗೆ ಸೂಚನೆ ನೀಡಿದ್ದಾರೆ.