ಬೆಂಗಳೂರು: ರಾಜ್ಯದಲ್ಲಿ 2024 -25 ನೇ ಸಾಲಿಗೆ ಅಧಿಕೃತ ಶಾಲೆಗಳ ಮಾಹಿತಿ ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮತ್ತು ಮಾನ್ಯತೆ ಪಡೆದು ಶಾಲೆ ನಡೆಸಬೇಕು. ಆದರೆ, ಕೆಲವು ಶಾಲೆಗಳು ಮಾನ್ಯತೆ ಪಡೆದುಕೊಂಡಿಲ್ಲ. ಅಂತಹ ಶಾಲೆಗಳ ಹೊರತುಪಡಿಸಿ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇಲಾಖೆಯಿಂದ ನೋಂದಣಿ ಮತ್ತು ಮಾನ್ಯತೆ ಪಡೆದ ಖಾಸಗಿ ಶಾಲೆಗಳ ವಿವರಗಳನ್ನು ಈಗಾಗಲೇ ಸ್ಯಾಟ್ಸ್ ತಂತ್ರಾಂಶದಲ್ಲಿ ಅಧಿಕೃತವಾಗಿ ದಾಖಲಿಸಿದ್ದಾರೆ. ಈ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಶಿಕ್ಷಣ ಸಂಯೋಜಕರು ಮತ್ತು ಬಿಇಒಗಳು ಪರಿಶೀಲಿಸಬೇಕು. ಶಾಲೆಯ ಹೆಸರು, ಡೈಸ್ ಕೋಡ್, ವಿಳಾಸ, ನೋಂದಣಿಯಾದ ವರ್ಷ, ನೋಂದಣಿ ಪಡೆದ ಮಾಧ್ಯಮ, ಮಾನ್ಯತೆ ನವೀಕರಿಸಿದ ಅವಧಿ ಮೊದಲಾದ ಎಲ್ಲಾ ವಿವರಗಳ ಪರಿಶೀಲಿಸಿ ಅಧಿಕೃತ ಶಾಲೆ ಎಂದು ಪ್ರಕಟಿಸಬೇಕು. ಆ ಮೂಲಕ ಪೋಷಕರಿಗೆ ತಮ್ಮ ಮಕ್ಕಳ ಶಾಲಾ ದಾಖಲಾತಿಗೆ ಮತ್ತು ಭವಿಷ್ಯದಲ್ಲಿ ಶೈಕ್ಷಣಿಕ ಮುನ್ನಡೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಅಧಿಕೃತ ಶಾಲೆಗಳ ಅಂತಿಮ ಪಟ್ಟಿಯನ್ನು ಏಪ್ರಿಲ್ 24ರಂದು ಪ್ರಕಟಿಸಬೇಕು. ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಗೋಚರವಾಗುವಂತೆ ಶಾಲೆಯ ಹೆಸರು, ಮಾಧ್ಯಮ ಮತ್ತು ಪಠ್ಯಕ್ರಮ, ವಿಳಾಸದ ವಿವರಗಳ ಸಹಿತ ಶಾಲೆಗಳ ಮಾಹಿತಿ ಪ್ರಕಟಿಸಬೇಕು. ಶಾಲೆಗಳು ಏಪ್ರಿಲ್ 25ರಂದು ಸೂಚನಾ ಫಲಕದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಮಾಹಿತಿ ಪ್ರಕಟಿಸಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.