ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಕಟ್ಟಡಕ್ಕೆ ಹಾನಿಯಾದಲ್ಲಿ ಎಸ್.ಡಿ.ಆರ್.ಎಫ್. ನಿಧಿ ಬಳಸಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಶಾಲೆಯ ಯಾವುದೇ ಭಾಗ ಹಾನಿಗೊಳಗಾದಲ್ಲಿ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಫೋಟೋ, ವರದಿಯನ್ನು ತಕ್ಷಣವೇ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳ ಬಳಿ ಇರುವ ಎಸ್.ಡಿ.ಆರ್.ಎಫ್. ನಿಧಿಯನ್ನು ದುರಸ್ತಿಗೆ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.
ರಾಜ್ಯದ ಬಹುತೇಕ ಕಡೆ ಹೆಚ್ಚಿನ ಮಳೆಯಾಗುತ್ತಿದ್ದು, ಶಾಲೆ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.